ದೊಡ್ಡಬಳ್ಳಾಪುರ: ದಕ್ಷಿಣ ಭಾರತದ ಸುಪ್ರಸಿದ್ಧ ಘಾಟಿ ದನಗಳ ಜಾತ್ರೆ ಡಿಸೆಂಬರ್ 20ರಿಂದ ಆರಂಭವಾಗಲಿದ್ದು, ಸಿದ್ಧತೆಗಳು ಪ್ರಾರಂಭವಾಗಿವೆ. ದನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ದಿಬ್ಬಗಳ ನಿರ್ಮಾಣ ಮತ್ತು ಶೆಡ್ಗಳ ಕೆಲಸವನ್ನು ಗೋಪಾಲಕರು ಪ್ರಾರಂಭಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ನಾಗರಾಧನೆಗೆ ಪ್ರಸಿದ್ಧಿ ಪಡೆದಿರುವ ಧಾರ್ಮಿಕ ಕ್ಷೇತ್ರ. ಹಾಗೆಯೇ, ರೈತರ ಜೀವನಾಡಿ ರಾಸುಗಳ ಜಾತ್ರೆಗೂ ಹೆಸರುವಾಸಿ. ಘಾಟಿ ದನಗಳ ಜಾತ್ರೆಯಲ್ಲಿ ತಮ್ಮ ದನಗಳನ್ನು ಮಾರಲು ಮತ್ತು ಕೊಳ್ಳಲು ಸುತ್ತಮುತ್ತಲಿನ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಗಳಿಂದ ರೈತರು ಇಲ್ಲಿಗೆ ಆಗಮಿಸುತ್ತಾರೆ.
ದೇವನಹಳ್ಳಿ ತಾಲೂಕು ಅರದೇಶನಹಳ್ಳಿಯ ಮರಿಯಪ್ಪ ಮತ್ತು ಮಕ್ಕಳು ಪ್ರತಿವರ್ಷ ಘಾಟಿ ದನಗಳ ಜಾತ್ರೆಗೆ ತಮ್ಮ ದನಗಳ ಜೊತೆ ಬರುತ್ತಾರೆ. ಹಳ್ಳಿಕಾರ್ ತಳಿಯ ದನಗಳನ್ನು ಸಾಕುವುದನ್ನು ತಮ್ಮ ಪರಂಪರೆ ಎಂದೇ ಭಾವಿಸಿರುವ ಮರಿಯಪ್ಪನವರ ಕುಟುಂಬ ಸಾವಿರಾರು ಹಳ್ಳಿಕಾರ್ ದನಗಳನ್ನು ಮಾರಾಟ ಮಾಡುವ ಮೂಲಕ ರೈತರ ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದನಗಳ ಜಾತ್ರೆಗಾಗಿ ಈಗಾಗಲೇ ಘಾಟಿಗೆ ಬಂದಿರುವ ಮರಿಯಪ್ಪ ಮತ್ತು ಮೊಮ್ಮಕ್ಕಳು ಸಿದ್ಧತೆ ನಡೆಸುತ್ತಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಮರಿಯಪ್ಪನವರ ಮೊಮ್ಮಗ ಅಪ್ಪಿ, "ನಮ್ಮ ಎತ್ತುಗಳನ್ನು 3 ರಿಂದ 4 ಲಕ್ಷ ರೂ.ವರೆಗೂ ಮಾರಿದ್ದೇವೆ. ನಾವು ಮಾಗಡಿ, ರಾಮನಗರ, ಮಂಡ್ಯದಿಂದ ಎತ್ತುಗಳನ್ನು ಕೊಂಡುಕೊಳ್ಳುತ್ತೇವೆ. ಈಗ ಜಾತ್ರೆಯಲ್ಲಿ ಮಾರಾಟ ಮಾಡಿದ ನಂತರ ಎರಡು ಜೊತೆ ನಮ್ಮ ಬಳಿಯಲ್ಲಿರುತ್ತವೆ. ಜಾತ್ರೆ ವೇಳೆ ಐದು ಜೊತೆ ಕೊಂಡುಕೊಳ್ಳುತ್ತೇವೆ. ರೈತರಿಂದ ಒಮ್ಮೆ ಎತ್ತುಗಳನ್ನು ಖರೀದಿಸಿ ತಂದು ಮೂರರಿಂದ ನಾಲ್ಕು ತಿಂಗಳವರೆಗೆ ಮೇಯಿಸುತ್ತೇವೆ. ಒಣಹುಲ್ಲು, ಹಿಂಡಿ, ಬೂಸಾ ನೀಡುತ್ತೇವೆ. ವರ್ಷದ ಮೊದಲ ದನಗಳ ಜಾತ್ರೆ ಪ್ರಾರಂಭವಾಗುವುದು ಘಾಟಿಯಲ್ಲಿ. ಕೃಷಿ ಕೆಲಸಕ್ಕೆ ಬೇಕಾದ ಉತ್ತಮ ಎತ್ತುಗಳು ಇಲ್ಲಿ ಸಿಗುವುದರಿಂದ ಉತ್ತರ ಕರ್ನಾಟಕ ರೈತರು ಘಾಟಿಗೆ ಬರ್ತಾರೆ" ಎಂದು ತಿಳಿಸಿದರು.
ಮರಿಯಪ್ಪನವರ ಮತ್ತೊಬ್ಬ ಮೊಮ್ಮಗ ಮಹೇಶ್ ಮಾತನಾಡಿ, "ದನಗಳ ಜಾತ್ರೆಯ ಅಂಗವಾಗಿ ದಿಬ್ಬಗಳ ನಿರ್ಮಾಣ ಕಾರ್ಯಕ್ಕೆ ಬಂದಿದ್ದೇವೆ. ನಮ್ಮ ತಾತನ ಕಾಲದಿಂದಲೂ ಬರುತ್ತಿದ್ದೇವೆ. ನಾವು ಮನೆಯಲ್ಲಿ ಸಾಕಿರುವ ಹಸುಗಳನ್ನು ಮಾರಾಟ ಮಾಡುತ್ತೇವೆ. ನಮ್ಮ ತಾತ ಆಗಿನಿಂದಲೂ ನಡೆಸಿಕೊಂಡು ಬಂದಿದ್ದಾರೆ, ಅದನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ಒಂದು ವಾರ ಪೂರ್ತಿ ಇಲ್ಲಿಯೇ ಶೆಡ್ ಹಾಕಿಕೊಂಡು ಇರುತ್ತೇವೆ. ಹಳ್ಳಿಕಾರ್ ಹಸುಗಳನ್ನು ಸಾಕಿದ್ದೇವೆ. ನಾವು ಮೂರುವರೆ ಲಕ್ಷಕ್ಕೆ ಮಾರಿದ್ದೇವೆ" ಎಂದು ಹೇಳಿದರು.
ರೈತ ಅಂಬರೀಶ್ ಮಾತನಾಡಿ, "ಈ ಬಾರಿ ಜಾತ್ರೆಯಲ್ಲಿ ಹಳ್ಳಿ ರೈತರನ್ನು ಮೆರೆಸಬೇಕೆಂಬುದೇ ನನ್ನ ಅಜೆಂಡಾ ಆಗಿದೆ. ಈ ಬಾರಿ ನಾವು ರೈತರಿಗೆ ಟೋಕನ್ ಕೊಡುವ ಮೂಲಕ ಅವರ ಎತ್ತು, ಹಸುಗಳನ್ನು ವೇದಿಕೆಗೆ ಕರೆಸಿ ಗೌರವ ನೀಡುವ ಕೆಲಸ ಮಾಡುತ್ತೇವೆ. ಡಿಸೆಂಬರ್ 21ರಿಂದ 24ರವರೆಗೂ ಜಾತ್ರೆ ನಡೆಯಲಿದ್ದು, ಜನರು ಪ್ರತಿದಿನವೂ ಇಲ್ಲಿಗೆ ಬನ್ನಿ, ನಮ್ಮ ರೈತರ ಕಡೆಯಿಂದ ಮನರಂಜನೆ ಇರುತ್ತೆ" ಎಂದು ತಿಳಿಸಿದರು.
ಇದನ್ನೂ ಓದಿ: ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಘಾಟಿಯಲ್ಲಿ ದನಗಳ ಜಾತ್ರೆ: ಅಧಿಕಾರಿಗಳಿಂದ ತಡೆ