ಬೆಂಗಳೂರು : ನಗರದಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕಂಡುಬರುತ್ತಿದೆ. ನಗರದ ರಸ್ತೆ ಬದಿಯಲ್ಲಿ ಬಣ್ಣ ಬಣ್ಣದ ಗಣೇಶ ಮೂರ್ತಿಗಳ ಮಾರಾಟವು ಭರ್ಜರಿಯಾಗಿ ನಡೆಯುತ್ತಿದೆ.
ತಮಗೆ ಬೇಕಾದ ರೀತಿಯ ಮೂರ್ತಿಗಳನ್ನು ಖರೀದಿಸುವ ನಿಟ್ಟಿನಲ್ಲಿ ಅನೇಕರು ಈಗಾಗಲೇ ತಮಗೆ ಬೇಕಾದಂತೆ ಮೂರ್ತಿ ತಯಾರು ಮಾಡಲು ಗಣೇಶ ಮೂರ್ತಿಗಳನ್ನು ಬುಕ್ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಮಣ್ಣಿನ ಮೂರ್ತಿಗಳಿಗೆ ವ್ಯಾಪಾರಿಗಳು ಹಾಗೂ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಪಿಒಪಿ ಮೂರ್ತಿಗಳ ಬದಲಾಗಿ ಮಣ್ಣಿನ ಮೂರ್ತಿಗಳನ್ನೇ ಹೆಚ್ಚು ತಯಾರು ಮಾಡುತ್ತಿದ್ದಾರೆ. ಈ ಹಿಂದೆ ಪಿಒಪಿ ಮೂರ್ತಿಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಅಂಗಡಿಗಳಿಗೆ ಬೀಗ ಜಡಿದಿದ್ದರು. ಈ ಹಿನ್ನಲೆಯಲ್ಲಿ ಪಿಒಪಿ ಬದಲಾಗಿ ಮಣ್ಣಿನ ಮೂರ್ತಿಗಳನ್ನೇ ಹೆಚ್ಚು ತಯಾರು ಮಾಡುತ್ತಿದ್ದು, ಅಂದ ಚಂದದ ಮಣ್ಣಿನ ಮೂರ್ತಿಗಳಿಗೆ ಹೆಚ್ಚು ಆದ್ಯತೆಯೂ ದೊರೆತಿದೆ. ಇದರಿಂದಾಗಿ ಮೂರ್ತಿಗಳ ಬೆಲೆಯನ್ನೂ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.30ರಷ್ಟು ಮಣ್ಣಿನ ಮೂರ್ತಿಗಳ ಬೆಲೆ ಏರಿಕೆಯಾಗಿದೆ.
1 ರಿಂದ 7 ಅಡಿಯವರೆಗೂ ಗಣೇಶ ಮೂರ್ತಿಗಳನ್ನು ಮಾಡಲಾಗಿದೆ. ಮೂರ್ತಿಗಳು 1000 ದಿಂದ 40 ಸಾವಿರದವರೆಗೂ ಮಾರಾಟವಾಗುತ್ತಿದ್ದು, ವ್ಯಾಪಾರಸ್ಥರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದು, ವ್ಯಾಪಾರಸ್ಥರು ಗಣೇಶ ಮೂರ್ತಿಗಳ ತಯಾರಿ ಹಾಗೂ ಮಾರಾಟದ ಕಡೆಗೆ ಗಮನಹರಿಸಿದ್ದಾರೆ.
ಭರ್ಜರಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ : ನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಇದರ ಬೆನ್ನಲ್ಲೇ ನಿಷೇಧಿಸಲಾಗಿರುವ ಪಿಒಪಿ ಮೂರ್ತಿಗಳ ಮಾರಾಟವು ಅವ್ಯಾಹತವಾಗಿ ನಡೆದಿದೆ.
ಪಿಒಪಿ ಮೂರ್ತಿಗಳ ಬಳಕೆಯನ್ನು ನಿಷೇಧಿಸಲಾಗಿದ್ದರೂ ಅವುಗಳ ವ್ಯಾಪಾರವು ನಡೆಯುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ಮಾತ್ರ ಗೈಡ್ ಲೈನ್ಸ್ ಹೊರಡಿಸಿ ಸುಮ್ಮನೆ ಕೂತಂತೆ ಕಂಡು ಬರುತ್ತಿದೆ. ನಗರದಲ್ಲಿ ನಿಷೇಧ ಹೇರಿ ಮೂರು ವರ್ಷಗಳೇ ಕಳೆದಿದ್ದರೂ ಕೂಡಾ ಇನ್ನೂ ಪಿಒಪಿ ಮೂರ್ತಿಗಳ ಹಾವಳಿ ಹೆಚ್ಚಿದೆ. ನಗರದ ಗಣೇಶ ಮೂರ್ತಿಗಳ ವ್ಯಾಪಾರಸ್ಥರು ಮಾತ್ರ ಈ ನಿಯಮ ನಮಗೆ ಅನ್ವಯವಾಗಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಆದರೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈಗಾಗಲೇ ಪಿಒಪಿ ಗಣೇಶಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
'ನಗರದ ರಸ್ತೆ ಬದಿಗಳಲ್ಲಿ ರಾಜಾರೋಷವಾಗಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ಧಾರೆ. ಇನ್ನು ಪಿಒಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದರೆ ಎಲ್ಲ ಪ್ರದೇಶಗಳಲ್ಲಿಯೂ ಮಾಡಬೇಕು. ಒಂದು ಏರಿಯಾದಲ್ಲಿ ಮಾಡಿ ಹೊಟ್ಟೆಯ ಮೇಲೆ ಹೊಡೆಯಬೇಡಿ' ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
'ನಗರದ ನಾಗಸಂದ್ರ, ಟ್ಯಾನರಿ ರೋಡ್ ಸೇರಿದಂತೆ ಎಲ್ಲಾ ಕಡೆ ಪಿಒಪಿ ಗಣೇಶ ಮೂರ್ತಿಗಳೇ ಕಾಣುತ್ತಿವೆ. ಆದರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಈ ಬಾರಿ ವ್ಯಾಪಾರ ವಹಿವಾಟು ಕೂಡ ಅಷ್ಟಾಗಿ ನಡೆಯುತ್ತಿಲ್ಲ' ಎಂದು ಗಣೇಶ ಮೂರ್ತಿಗಳ ವ್ಯಾಪಾರಿ ಶಂಕರಪ್ಪ ತಿಳಿಸಿದ್ದಾರೆ.
ಸರ್ಕಾರಿ ಆದೇಶ ಹೊರಡಿಸಲಾಗಿದೆ : 'ಪಿಒಪಿ ಮೂರ್ತಿಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ವಾಯು ಮತ್ತು ಜಲ ಕಾಯಿದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಇಲ್ಲಿಯವರೆಗೆ ಕೇವಲ ನಿರ್ದೇಶನಗಳನ್ನು ನೀಡಲಾಗುತ್ತಿತ್ತು. ಆದರೆ, ಈಗ ಸಾಕಷ್ಟು ಮುಂಚಿತವಾಗಿಯೇ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದು, ಪರಿಸರ ಸ್ನೇಹಿ ವಿಗ್ರಹಗಳನ್ನು ಉತ್ತೇಜಿಸಲು ಜಿಲ್ಲಾಧಿಕಾರಿಗಳ ಅಡಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ' ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
'ಸರ್ಕಾರವು ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಸಾಗಣೆ ನಿಷೇಧಿಸಿದ್ದರೂ ಅವು ಬಳಕೆಯಲ್ಲಿವೆ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲು, ಪೊಲೀಸ್, ಸಾರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ಲಿಖಿತ ಅನುಮತಿ ನೀಡುವಾಗ ಕಡ್ಡಾಯವಾಗಿ ಪಿಒಪಿ ಮೂರ್ತಿಗಳನ್ನು ಬಳಸುವಂತಿಲ್ಲ, ಪರಿಸರ ಸ್ನೇಹಿಯಾಗಿ ವಿಗ್ರಹಗಳನ್ನು ನಿಮಜ್ಜನಗೊಳಿಸಲಾಗುವುದು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೈಸೂರು: ಬಾಲರಾಮನ ಮಾದರಿಯ ಬಾಲ ಗಣಪತಿಗೆ ಡಿಮ್ಯಾಂಡ್ - Bala Ganapati