ಹಾವೇರಿ: ಗದಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಕುಟುಂಬದ ಆಧಾರಸ್ತಂಭಗಳನ್ನೇ ಬಲಿ ಪಡೆದಿದೆ. ಭೀಕರ ಅಪಘಾತದಲ್ಲಿ ಮರಣ ಹೊಂದಿರುವ ಮೃತರ ತಂದೆ-ತಾಯಿಗೆ ಮಗ-ಸೊಸೆ, ಮೊಮ್ಮಕ್ಕಳು ಸಾವನ್ನಪ್ಪಿರುವ ವಿಚಾರವನ್ನು ತಿಳಿಸದೇ ಮರೆಮಾಚಲಾಗಿದೆ. ಈ ವಿಚಾರ ಗೊತ್ತಾದರೆ ಹಿರಿಯ ಜೀವಗಳಿಗೂ ಅಪಾಯವಾಗಬಹುದು ಎಂಬ ದೃಷ್ಟಿಯಿಂದ ಈ ವಿಷಯವನ್ನು ತಿಳಿಸಿಲ್ಲ ಎನ್ನಲಾಗ್ತಿದೆ.
ಹೌದು, ಇಂದು ಬೆಳಗ್ಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಹಾವೇರಿ ನಗರದ ದಂಪತಿ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45) ಹಾಗೂ ಅವರ ಮಗಳು ಐಶ್ವರ್ಯ (16) ಮತ್ತು ಮಗ ವಿಜಯ (12) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ತಂದೆ-ತಾಯಿಗೆ ವಿಚಾರ ತಿಳಿಸದ ಕುಟಂಬಸ್ಥರು: ಯಜಮಾನ ರುದ್ರಪ್ಪ ಅಂಗಡಿ ಹಾವೇರಿಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೃತ ರುದ್ರಪ್ಪ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಪಘಾತ ಘಟನೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಸ್ನೇಹಿತರು ರುದ್ರಪ್ಪ ಮನೆಗೆ ಆಗಮಿಸುತ್ತಿದ್ದಾರೆ. ಮನೆಯಲ್ಲಿ ರುದ್ರಪ್ಪ ತಂದೆ-ತಾಯಿ ಇದ್ದು, ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅಪಘಾತದ ವಿಷಯ ತಂದೆ-ತಾಯಿಗೆ ಇನ್ನೂ ತಿಳಿಸಿಲ್ಲ.
ಸುದ್ದಿ ತಿಳಿಯದೆ ಮಕ್ಕಳು, ಮೊಮ್ಮಕ್ಕಳ ದಾರಿ ಕಾಯುತ್ತಿರುವ ವೃದ್ಧ ದಂಪತಿ: ಕಲ್ಲಾಪೂರ ಬಸವೇಶ್ವರ ದೇವಸ್ಥಾನ ಜಾತ್ರೆಗೆ ತೆರಳಿದ್ದು ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿರುವ ಆ ಹಿರಿಯ ಜೀವಗಳಿಗೆ ಮಕ್ಕಳು, ಮೊಮ್ಮಕ್ಕಳು ಇನ್ನಿಲ್ಲ ಎಂಬ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂಬ ಆತಂಕ ಕುಟುಂಬಸ್ಥರಿಗೆ ಕಾಡುತ್ತಿದೆ. ತಮಗೆ ಕೊಳ್ಳಿ ಇಡಬೇಕಾಗಿದ್ದ ಮಕ್ಕಳಿಗೇ ಈಗ ಪೋಷಕರೇ ಮೋಕ್ಷ ನೀಡುವಂತಾಗಿದೆ. ದೇವರ ದರ್ಶನ ಪಡೆದು ಮನೆಗೆ ವಾಪಸ್ ಆಗಬೇಕಿದ್ದ ಕುಟುಂಬದ ನಾಲ್ವರು ಸದಸ್ಯರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.
ಇನ್ನು, ಈ ಮಧ್ಯೆ ಮರಣೋತ್ತರ ಪರೀಕ್ಷೆ ನಂತರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹಗಳನ್ನು ಹಾವೇರಿಗೆ ತರಲಾಗುತ್ತದೆ. ನಂತರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.