ಬೆಂಗಳೂರು: ಸಂಪೂರ್ಣ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಯಾವ ರೀತಿ ವರದಿ ಬರುತ್ತದೆಯೋ ಅದರ ಮೇಲೆ ಕ್ರಮದ ಬಗ್ಗೆ ನಿರ್ಧರಿತವಾಗುತ್ತದೆ. ನಿನ್ನೆ ಕೂಡ ಈ ಬಗ್ಗೆ ಸ್ಪಷ್ಟತೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಖಾಸಗಿ ಸಂಸ್ಥೆ FSL ರಿಪೋರ್ಟ್ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಖಾಸಗಿಯವರು ಯಾರು, ಅವರಿಗೆ NOC ಯಾರು ಕೊಟ್ಟಿದ್ದಾರೆ. ಅವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ? ಎಲ್ಲವನ್ನೂ ಚೆಕ್ ಮಾಡುತ್ತೇನೆ. ಸರ್ಕಾರದ FSL, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕೂಗಿರೋದು ಪಾಸಿಟಿವ್ ಆಗಿ ದೃಢ ಆಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಸರ್ಕಾರವೇ ಸತ್ಯಾಂಶವನ್ನು ಮುಚ್ಚಿಡುತ್ತಿದೆ ಅಂತ ಆರೋಪ ಮಾಡುತ್ತಿದ್ದಾರೆ ಎನ್ನವುದು ಸರಿಯಲ್ಲ ಎಂದರು.
ಮರುದಿನವೇ ಸಚಿವ ಪ್ರಿಯಾಂಕ್ ಖರ್ಗೆ ವರದಿ ಬಂದಿದೆ ಅನ್ನೋ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳುತ್ತೇನೆ ಎಂದು ತಿಳಿಸಿದರು.
ಬಳಿಕ, ಕೆಫೆ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಾತನಾಡಿ, ನಿನ್ನೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿ, ಈಗಾಗಲೇ ಎಲ್ಲವನ್ನೂ ಹೇಳಿದ್ದೇನೆ. ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. NIA ಟೀಂ ಈಗಾಗಲೇ ಬಂದಿದ್ದಾರೆ. NSG ಕೂಡ ಬಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ, ವ್ಯಕ್ತಿ ಇದ್ದಾರಾ, ಸಂಘಟನೆ ಇದೆಯಾ. ಎಲ್ಲವನ್ನೂ ಪರಿಶೀಲನೆ ಮಾಡಬೇಕು ಎಂದು ಸಚಿವರು ಹೇಳಿದರು.
ಜಾತಿಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸಿಎಂ ಅವರೇ ಕ್ಯಾಬಿನೆಟ್ನಲ್ಲಿ ಇಟ್ಟು ನಿರ್ಧಾರ ಅಂತ ಹೇಳಿದ್ದಾರೆ. ವಿರೋಧ ಮಾಡೋದು, ಪರ ಮಾತನಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದಿದ್ದೇ. ವರದಿ ತರಿಸಿಕೊಂಡ ಮೇಲೆ ಲಾಜಿಕ್ ಎಂಡ್ ಆಗಬೇಕು. ಇಲ್ಲವೇ ರಿಜೆಕ್ಟ್ ಮಾಡಬೇಕು. ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ಧ ಎಂದರು.
ಇದನ್ನೂ ಓದಿ: ಬೆಂಗಳೂರನ್ನು ಸೇಫ್ ಸಿಟಿ ಮಾಡುವ ಪ್ರಯತ್ನ ಮುಂದುವರೆಯಲಿದೆ: ಗೃಹ ಸಚಿವ ಪರಮೇಶ್ವರ್