ಬೆಂಗಳೂರು: ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಳೆಗೇರಿಗಳಿಗೆ ಸೊಳ್ಳೆ ಪರದೆ ವಿತರಿಸುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಕಾಸಸೌಧದಲ್ಲಿ ಶನಿವಾರ ಮಾತನಾಡಿದ ಅವರು, ಈಡಿಸ್ ಸೊಳ್ಳೆ ಬೆಳಗ್ಗೆ ಕಚ್ಚುತ್ತದೆ, ರಾತ್ರಿ ಕಚ್ಚುವುದಿಲ್ಲ. ಹೀಗಾಗಿ ಸೊಳ್ಳೆ ಪರದೆಯ ಅಗತ್ಯವಿಲ್ಲ ಎಂದರು.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ್ದರು. ಈ ಸಂದರ್ಭದಲ್ಲಿ, ಕೊಳೆಗೇರಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ನೀಡಲು ಸೂಚಿಸಲಾಗಿದೆ ಎಂದಿದ್ದರು. ಹೀಗಾಗಿ ಸಚಿವ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಡೆಂಗ್ಯೂ ನಿಯಂತ್ರಣ ನಿರಂತರ ಪ್ರಕ್ರಿಯೆಗೆ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಯೂ ಜಾಗೃತಿ ಮೂಡಿಸ್ತಿದ್ದಾರೆ. ಗೈಡ್‌ಲೈನ್ಸ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ಪ್ರಕರಣ ಹೆಚ್ಚಾಗುತ್ತಾ ಕಡಿಮೆ ಆಗುತ್ತೆ ಎಂದು ಪ್ರೆಡಿಕ್ಟ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆ ಆರೋಗ್ಯ ಇಲಾಖೆ ಸುಪರ್ದಿಗೆ: ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಿಬಿಎಂಪಿಯೇ ನಿರ್ವಹಿಸುತ್ತಿದೆ. ನಮ್ಮ ಕ್ಲಿನಿಕ್, ಮೆಟರ್ನಿಟಿ ಆಸ್ಪತ್ರೆಗಳನ್ನೂ ಬಿಬಿಎಂಪಿನೇ ನೋಡಿಕೊಳ್ಳುತ್ತದೆ. ಅದಕ್ಕೆ ನೀವು ಸಹಕಾರ ನೀಡಿ. ಉಳಿದ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಮನವಿ ಮಾಡುತ್ತಿದೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಬಿಬಿಎಂಪಿಯವರು ಕೆ.ಆರ್.ಪುರ, ಯಶವಂತಪುರ, ಗೋವಿಂದ ರಾಜನಗರದಲ್ಲಿ ಆಸ್ಪತ್ರೆ ಕಟ್ಟಿದ್ದಾರೆ. ಅದರಲ್ಲಿ ಸಿಬ್ಬಂದಿ ಇಲ್ಲ. ಹೀಗಾಗಿ ಅದರ ನಿರ್ವಹಣೆಯನ್ನು ನೀವೇ ತೆಗೆದುಕೊಳ್ಳುವಂತೆ ಹೇಳ್ತಿದ್ದಾರೆ. ಈ ಸಂಬಂಧ ಒಂದು ವಾರದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ದಕ್ಷಿಣ ಕನ್ನಡದಲ್ಲಿ ಮಳೆ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿ, ಭಾನುವಾರ ನಾನು ಮಂಗಳೂರಿಗೆ ಹೋಗುತ್ತಿದ್ದೇನೆ. ಇಡೀ ದಿನ ಅಲ್ಲೇ ಇದ್ದು ಪರಿಶೀಲಿಸುತ್ತೇನೆ. ವಿಪತ್ತು ನಿರ್ವಹಣೆ ತಂಡ, ಕೋಸ್ಟ್ ಗಾರ್ಡ್, ಜಿಲ್ಲಾಡಳಿತ ಎಲ್ಲರೂ ಅಲರ್ಟ್ ಆಗಿರುವಂತೆ ಸೂಚಿಸಿದ್ದೇನೆ. ಕೂಡಲೇ ಪರಿಹಾರ ಕಾರ್ಯ ಒದಗಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸೌಧದ ಗುಮ್ಮಟದಲ್ಲಿ ಕಿರಿದಾದ ಬಿರುಕು; ಸ್ಪೀಕರ್ ಖಾದರ್ ಹೇಳಿದ್ದೇನು? - Vidhana Soudha