ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಹೊಸತೊಡಕಿಗೆ ಮಟನ್ ಚೀಟಿ ಹೆಸರಲ್ಲಿ ವಂಚಿಸುತ್ತಿದ್ದ ಆರೋಪದಡಿ ಪುಟ್ಟಸ್ವಾಮಿಗೌಡ ಎಂಬಾತನನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಟನ್ ಚೀಟಿ ಹೆಸರಿನಲ್ಲಿ ಸುಮಾರು ಐದು ಸಾವಿರ ಜನರಿಂದ ತಿಂಗಳಿಗೆ 400 ರೂ.ನಂತೆ ವರ್ಷಕ್ಕೆ 4,800 ರೂ ಕಲೆಕ್ಟ್ ಮಾಡಿದ್ದ ಆರೋಪಿ, ಹಬ್ಬ ಸಮೀಪಿಸುತ್ತಿದ್ದಂತೆ ಯಾರ ಕೈಗೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಇದೇ ಮಾದರಿಯಲ್ಲಿ ಬ್ಯಾಟರಾಯನಪುರ, ಗಿರಿನಗರ ಸುತ್ತಮುತ್ತಲಿನ ಏರಿಯಾಗಳ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿಂದ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ನಾಪತ್ತೆಯಾಗಿದ್ದ.
ಮಟನ್ ಚೀಟಿ ಕಟ್ಟಿ ಮೋಸ ಹೋದವರು ಬ್ಯಾಟರಾಯನಪುರದಲ್ಲಿ ಆತನ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ವಂಚಕನಿಗೆ ಬಲೆ ಬೀಸಿದ್ದರು. ಯಾರ ಸಂಪರ್ಕಕ್ಕೂ ಸಿಗದೇ ಚೀಟಿಯಲ್ಲಿದ್ದ ಫೋನ್ ನಂಬರ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಲಾಭಾಂಶ ಕೊಡುವ ನೆಪದಲ್ಲಿ 84 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ - Money Fraud