ಬೆಂಗಳೂರು: "ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಚರ್ಚಿಸಲು ಮತ್ತು ಅನ್ವೇಷಿಸಲು ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಶೃಂಗಸಭೆಯ ಪೂರ್ವಭಾವಿಯಾಗಿ ನುರಿತ ತಜ್ಞರನ್ನು ಒಳಗೊಂಡ ನಾಲ್ಕು ಸಮ್ಮೇಳನಗಳನ್ನು ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗುವುದು" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, "ಕರ್ನಾಟಕ ಮತ್ತು ಭಾರತದ ವಿವಿಧೆಡೆ ನೆಲೆಸಿರುವ ಚಿಂತಕರು, ನೀತಿ ನಿರೂಪಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಸಮುದಾಯದ ಮುಖಂಡರನ್ನು ಒಟ್ಟುಗೂಡಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು, ಗ್ರಾಮೀಣ ಸವಾಲುಗಳನ್ನು ಗುರುತಿಸಲು, ಸಹಯೋಗಗಳನ್ನು ಉತ್ತೇಜಿಸಲು ಮತ್ತು ತಾಂತ್ರಿಕ ಆವಿಷ್ಕಾರದ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ವೇದಿಕೆಯನ್ನು ಸೃಷ್ಟಿಸಲಾಗುವುದು" ಎಂದು ತಿಳಿಸಿದ್ದಾರೆ.
"ನೀರಿನ ಸವಾಲುಗಳು ಮತ್ತು ಪರಿಹಾರಗಳ ಶೃಂಗಸಭೆಯು ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ನೀರಿನ ಸವಾಲುಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಚರ್ಚಿಸಲಿದೆ. ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಿಹಾರಗಳ ಶೃಂಗಸಭೆಯು ನವೀನ ತಾಂತ್ರಿಕ ಪರಿಹಾರಗಳ ಮೂಲಕ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ" ಎಂದು ಮಾಹಿತಿ ನೀಡಿದ್ದಾರೆ.
"ವರ್ತುಲ ಆರ್ಥಿಕತೆಯ ಸಭೆಯು ಇಂದಿನ ಜಗತ್ತಿನಲ್ಲಿ ವರ್ತುಲ ಆರ್ಥಿಕತೆಯ ಪ್ರಾಮುಖ್ಯತೆ ಹಾಗೂ ಅದನ್ನು ಅರ್ಥೈಸಿಕೊಳ್ಳಲು ವೇದಿಕೆಯಾಗಲಿದೆ" ಎಂದು ಸಚಿವರು ತಿಳಿಸಿದ್ದಾರೆ.
ಸಭೆಯಲ್ಲಿ ಅಭಿವೃದ್ಧಿ ಆಯುಕ್ತರೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್, ಮಾಹತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.