ಹಾಸನ: ನಟೋರಿಯಸ್ ರೌಡಿಶೀಟರ್ ಚೈಲ್ಡ್ ರವಿಯನ್ನು ಇತ್ತೀಚೆಗೆ ನಾಲ್ವರು ಬರ್ಬರವಾಗಿ ಕೊಲೆ ಮಾಡಿದ್ದರು. ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊನೆಗೂ ಹಂತಕರನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಮಾರನೇ ದಿನ ನೀರು ತರಲೆಂದು ಹೋಗಿದ್ದ ಚೈಲ್ದ್ ರವಿ ಆಲಿಯಾಸ್ ರವಿಕುಮಾರ್ ನನ್ನು ಕಾರಿನಲ್ಲಿ ಬಂದ 4 ಮಂದಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಆರೋಪಿಗಳನ್ನು ಕೊನೆಗೂ ಹಾಸನ ಹೊರವಲಯದ ಗ್ಯಾರಳ್ಳಿ ಬಳಿ ಅರೆಸ್ಟ್ ಮಾಡಲಾಗಿದೆ. ಪ್ರೀತಮ್ (27), ಕೀರ್ತಿ(26), ರಂಗನಾಥ್ ಅಲಿಯಾಸ್ ರಂಗ(26) ಹಾಗೂ ಅಮಿತ್ ಆಲಿಯಾಸ್ ಅಮ್ಮಿ (31) ಬಂಧಿತ ಆರೋಪಿಗಳು.
ಏನಿದು ಪ್ರಕರಣ? ಇದೇ ಜೂನ್ 5ರ ಮುಂಜಾನೆ 7 ಗಂಟೆ 50 ನಿಮಿಷಕ್ಕೆ ರೌಡಿ ಶೀಟರ್ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ರೌಡಿಶೀಟರ್ ಎರಡು ಕೊಲೆ ಸೇರಿ ಏಳು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಇತ್ತ ಈಗಾಗಲೇ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಪ್ರೀತಮ್ ಹಾಗೂ ರವಿ ನಡುವೆ ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ಪೈಟ್ ಶುರುವಾಗಿತ್ತು. ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗುತ್ತೇನೆ ಎಂದು ಪ್ರೀತಮ್ ಹೇಳಿಕೊಂಡಿದ್ದ. ಅದರಂತೆ ಆತನನ್ನು ಕೊಲೆ ಮಾಡಲು ಸ್ಕೇಚ್ ಹಾಕಿ ತನ್ನ ಸಹಚರರೊಂದಿಗೆ ಜೂ.5ರಂದು ಬೆಳ್ಳಂ ಬೆಳಗ್ಗೆ ಬಂದು ಚೈಲ್ಡ್ ರವಿಯನ್ನು ಹತ್ಯೆಮಾಡಿದ್ದರು.
ಚೈಲ್ಡ್ ರವಿ ಹಿನ್ನೆಲೆ: ಹಾಸನದಲ್ಲಿ ನಟೋರಿಯಸ್ ರೌಡಿಯಾಗಿದ್ದ 45ರ ಹರೆಯದ ರವಿ ಅಲಿಯಾಸ್ ಚೈಲ್ಡ್ ರವಿ ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಹಿನ್ನೆಲೆ ಕರಾಳವಾಗಿದೆ. ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ. ಹಾಗಾಗಿಯೇ ಇವನಿಗೆ ಚೈಲ್ಡ್ ರವಿ ಎಂದು ಹೆಸರು ಬಂದಿದೆ ಎನ್ನುವ ಮಾತುಗಳಿವೆ. ಅಲ್ಲಿಂದ ರೌಡಿಸಂ ಫೀಲ್ಡ್ಗೆ ಎಂಟ್ರಿಕೊಟ್ಟಿದ್ದ. 2014 ರಲ್ಲಿ ಹಾಸನ ನಗರದ ಸಹ್ಯಾದ್ರಿ ವೃತ್ತದಲ್ಲಿ ಕುಖ್ಯಾತ ರೌಡಿ ಸ್ಲಂ ಮಂಜನ ಮರ್ಡರ್ ಮಾಡಿದ್ದ ಆರೋಪದಲ್ಲಿ ಮತ್ತೆ ಜೈಲು ಸೇರಿದ್ದ. ಬಳಿಕ 2016ರಲ್ಲಿ ಕೊಲೆ, ದರೋಡೆಯಂತಹ ಕೇಸ್ಗಳಲ್ಲಿ ಭಾಗಿಯಾಗಿದ್ದ. 2016ರಲ್ಲಿ ಅಂದಿನ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಚೈಲ್ಡ್ ರವಿಯನ್ನು ಬಂಧಿಸಿ, ಹಾಸನ ರಸ್ತೆಯಲ್ಲಿ ಮೆರವಣಿಗೆ ಮಾಡಿ ಈತ ಇನ್ನು ರೌಡಿ ಅಲ್ಲ, ಈತನ ಹೆಸರು ಚೈಲ್ಡ್ ರವಿಯಲ್ಲ ಎಂದು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು.
ಇದನ್ನೂ ಓದಿ: ಹಾಸನದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು: ನಟೋರಿಯಸ್ ರೌಡಿ ಚೈಲ್ಡ್ ರವಿ ಹತ್ಯೆ - Rowdy Murder
ಒಮ್ಮೆ ಇವನನ್ನು ಗಡಿಪಾರು ಕೂಡ ಮಾಡಿಸಿದ್ದರು. ಇಷ್ಟೆಲ್ಲದರ ನಡುವೆ ಕಳೆದ ನಾಲ್ಕು ವರ್ಷಗಳಿಂದ ರವಿ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ. ಎಲ್ಲಿಯೂ ಗಲಾಟೆ ಮಾಡಿಕೊಂಡ ಬಗ್ಗೆ ಠಾಣೆಗೆ ದೂರು ಕೂಡ ಬಂದಿರಲಿಲ್ಲ. ಈ ನಡುವೆ ಡಾನ್ ಪಟ್ಟಕ್ಕಾಗಿ ಈ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ನೀರು ತರಲೆಂದು ನೀರಿನ ಘಟಕಕ್ಕೆ ಹೋಗಿ ವಾಪಸ್ ಬರುವಾಗ ಹಂತಕರು ಅಟ್ಯಾಕ್ ಮಾಡಿದ್ದರು. ಮಾರಕಾಸ್ತ್ರಗಳಿಂದ ನಾಲ್ವರು ದುಷ್ಕರ್ಮಿಗಳು ರಸ್ತೆಯಲ್ಲಿಯೇ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದರು. ಪೆನ್ಷನ್ ಮೊಹೊಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊನೆಗೂ ಡಾನ್ ಪಟ್ಟಕ್ಕಾಗಿ ಹತ್ಯೆ ನಡೆಸಿದ ಆ ನಾಲ್ವರು ಹಂತಕರನ್ನು ಕೊಲೆಯಾದ ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪೊಲೀಸರು.
ಇದನ್ನೂ ಓದಿ: ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್ವಸ್ವ ಅರ್ಪಿಸಿದ್ದ ರಾಮೋಜಿ ರಾವ್: ಯುವ ಪೀಳಿಗೆಗೆ ಸ್ಫೂರ್ತಿಯ ಸಾಧಕ - Ramoji Rao