ಕಲಬುರಗಿ: ಪ್ರೀತಿ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ (18) ಎಂಬಾತನನ್ನು ಹಲ್ಲೆಗೈದು ಮಂಗಳವಾರ ಕೊಲೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಸಂಬಂಧಿಗಳಾದ ಅನಿಲ್ ರಾಠೋಡ್, ಸಂತೋಷ್ ರಾಠೋಡ್, ಸಾಗರ ಜಾಧವ್ ಹಾಗೂ ಹೇಮಂತ್ ರಾಠೋಡ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯ ಗಂಗಾನಗರ ನಿವಾಸಿಯಾಗಿದ್ದ ಅಭಿಷೇಕ್ ಹಾಗೂ ಅಪ್ರಾಪ್ತ ಬಾಲಕಿ ಸುಮಾರು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಾಟ್ಸಪ್ ಮೂಲಕ ಚಾಟಿಂಗ್ ಮತ್ತು ಸಂಭಾಷಣೆ ಕೂಡ ಮಾಡುತ್ತಿದ್ದರು. ಈ ವಿಚಾರ ಬಾಲಕಿಯ ಕುಟುಂಬಸ್ಥರಿಗೆ ತಿಳಿದು ವಾರ್ನಿಂಗ್ ಕೂಡಾ ಮಾಡಿದ್ದರು. ಆದರೂ ಇಬ್ಬರ ನಡುವಿನ ಪ್ರೀತಿ ಹಾಗೆ ಮುಂದುವರೆದಿತ್ತು.
ಹೀಗಿರುವಾಗ ಕಳೆದ ಸೋಮವಾರ ರಾತ್ರಿ ಆಕೆಯೇ ಫೋನ್ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಳಂತೆ. ಹಾಗೇ ಹೋದ ಅಭಿಷೇಕ್, ಆಕೆಯ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಆಗ ಕಟ್ಟಿಗೆ ಕಬ್ಬಿಣದ ಸಲಾಕೆಯಿಂದ ಆತನನ್ನು ಮನಬಂದಂತೆ ಥಳಿಸಿದ್ದರು. ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಅಭಿಷೇಕ್ನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಿಜೆಪಿ ಮುಖಂಡರ ಕೊಲೆ, ಆರೋಪಿಗಳು ಸೆರೆ: ಸಂತ್ರಸ್ತರ ಕುಟುಂಬಗಳಿಗೆ ಅಶೋಕ್ ಸಾಂತ್ವನ