ಬೆಂಗಳೂರು: ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ಮೂವರು ಯುವಕರು ಹೋಗುತ್ತಿದ್ದ ಕಾರಿಗೆ ಅಡ್ಡಗಟ್ಟಿದ ಇಬ್ಬರು ಯುವಕರು ಆಕ್ಷೇಪ ವ್ಯಕ್ತಪಡಿಸಿ, ಹಲ್ಲೆ ನಡೆಸಿರುವ ಆರೋಪದ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಿಗೆಹಳ್ಳಿ ನಿವಾಸಿಗಳಾದ ವಿನಾಯಕ್, ರಾಹುಲ್ ಹಾಗೂ ಪವನ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಲು ಎಂ.ಎಸ್.ಪಾಳ್ಯ ಕಡೆಗೆ ಒಂದೇ ಕಾರಿನಲ್ಲಿ ಬುಧವಾರ ಮಧ್ಯಾಹ್ನ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಾವುಟ ಹಿಡಿದುಕೊಂಡು, ಜೈ ಶ್ರೀರಾಮ್ ಎಂದು ಜೈಕಾರ ಕೂಗಿದ್ದರು. ಇದನ್ನು ಗಮನಿಸಿದ ಇಬ್ಬರು ಯುವಕರು ಬೈಕ್ನಲ್ಲಿ ಫಾಲೋ ಮಾಡಿಕೊಂಡು ಬಂದು ವಾಹನ ಅಡ್ಡಗಟ್ಟಿ ಜೈ ಶ್ರೀರಾಮ್ ಕೂಗದಂತೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೇ, ಯುವಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಇದನ್ನು ಪ್ರಶ್ನಿಸಿ ಕಾರಿನಿಂದ ಕೆಳಗಿಳಿಯುತ್ತಿದಂತೆ ಕ್ಷಣಾರ್ಧದಲ್ಲೇ ಯುವಕರು ಎಸ್ಕೇಪ್ ಆಗಿದ್ದಾರೆ. ಬಳಿಕ ಮತ್ತೆ ಕಾರನ್ನು ಫಾಲೋ ಮಾಡಿದ ಇಬ್ಬರು ಯುವಕರು ಜೊತೆಗೆ ಮತ್ತೆ ಮೂವರನ್ನು ಒಗ್ಗೂಡಿಸಿಕೊಂಡು ಬಂದು ದೊಣ್ಣೆಯಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಂದನೆ ದೃಶ್ಯಾವಳಿ ಮೊಬೈಲ್ನಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಇಬ್ಬರು ಆರೋಪಿಗಳು ಹಾಗೂ ಇನ್ನಿಬ್ಬರು ಅಪ್ರಾಪ್ತರ ಸಹಿತ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: ಘಟನೆ ಸಂಬಂಧ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ''ವಿದ್ಯಾರಣ್ಯಪುರ ಬೆಟ್ಟಳ್ಳಿ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಘಟನೆಯಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ತನಿಖೆ ಮುಂದುವರೆದಿದ್ದು, ಮತ್ತೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಹೋದರಿಗೆ ಮೆಸೇಜ್ ಮಾಡುತ್ತಿದ್ದ ಯುವಕನ ಹತ್ಯೆಗೆ ಸುಫಾರಿ: ತಮ್ಮ ಸೇರಿ ಮೂವರ ಬಂಧನ - Three youths arrested