ಮೈಸೂರು: ಇಂದಿರಾ ಕ್ಯಾಂಟಿನ್ಗಳು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಡೆದ ಇಂದಿರಾ ಕ್ಯಾಂಟಿನ್ ಶಂಕುಸ್ಥಾಪನೆ ಹಾಗೂ ಮುಖ್ಯಮಂತ್ರಿಗಳ ನಗರೋತ್ಥಾನದ ಅಡಿ ಆಯ್ದ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು.
ಹೊಸದಾಗಿ 9 ಇಂದಿರಾ ಕ್ಯಾಂಟಿನ್ಗಳಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈಗಾಗಲೇ 2016 ರ ಇಸವಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟಿನ್ ಗಳನ್ನು ಹೊಸದಾಗಿ ಪ್ರಾರಂಭಿಸಲಾಯಿತು. 5 ರೂ ಗೆ ತಿಂಡಿ 10 ರೂ. ಗೆ ಊಟ ನೀಡಲು ಆರಂಭಿಸಲಾಯಿತು. ಕರ್ನಾಟಕದಲ್ಲಿ 520 ಇಂದಿರಾ ಕ್ಯಾಂಟಿನ್ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಕಡಿಮೆ ದರದಲ್ಲಿ ಉತ್ತಮ ತಿಂಡಿ ಊಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟಿನ್ಗಳು ಕೆಲಸ ಮಾಡುತ್ತಿದ್ದು, ಇದರಲ್ಲಿ 12 ಮೈಸೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ರಾಗಿ ಮುದ್ದೆ ಸೊಪ್ಪು ಸಾರು ನೀಡಲು ಕ್ರಮ: ಇಂದಿರಾ ಕ್ಯಾಂಟಿನ್ಗಳಲ್ಲಿ ಹೊಸದಾಗಿ ರಾಗಿ ಮುದ್ದೆ ಸೊಪ್ಪು ಸಾರು ನೀಡಲು ಕ್ರಮ ವಹಿಸಲಾಗಿದೆ. ನಮ್ಮ ಸರ್ಕಾರದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ಗಳ ವಿತರಣೆ ಮಾಡಲಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಸಂವಿಧಾನದ ಮೂಲ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಬಡ ವರ್ಗದ ಜನತೆಗೆ ಆಹಾರ, ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಯುವನಿಧಿ ಸಹಾಯಧನ ದೊರೆಯುತ್ತಿದೆ. ಇದರಿಂದ ಜನರ ಜೀವನಮಟ್ಟ ಸುಧಾರಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಇಂದು ನಗರದಲ್ಲಿ 9 ಇಂದಿರಾ ಕ್ಯಾಂಟಿನ್ ಗಳ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 17 ಇಂದಿರಾ ಕ್ಯಾಂಟಿನ್ ಗಳು ಕಾರ್ಯ ನಿರ್ವಹಿಸುತ್ತಿವೆ. ಊಟದ ಮೆನು ಬದಲಾಯಿಸಿದ್ದು, ಮುದ್ದೆ ಮತ್ತು ಸೊಪ್ಪು ಸಾಂಬಾರ್ ನೀಡಲು ಟೆಂಡರ್ನಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉತ್ತಮ ಆಹಾರ ನೀಡಲು ಇಂದಿರಾ ಕ್ಯಾಂಟಿನ್ ಗಳನ್ನು ಸರ್ಕಾರದ ವತಿಯಿಂದ ತೆರೆಯಲಾಗುತ್ತಿದೆ ಎಂದರು.
ಇದನ್ನೂಓದಿ:ಬೆಣ್ಣೆ ನಗರಿಯಲ್ಲಿ ಭಾರತ್ ಅಕ್ಕಿ ಖರೀದಿಗೆ ಮುಗಿಬಿದ್ದ ಜನ: ಪೋಲಿಸರ ಸಮ್ಮುಖದಲ್ಲಿ ವಿತರಣೆ