ಬೆಂಗಳೂರು: ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಿ, ನಾಯಕತ್ವ ವಹಿಸಿ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ. ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಪರ ಬ್ಯಾಟಿಂಗ್ ಮಾಡುತ್ತಿರುವ ಸಚಿವರಿಗೆ ಈ ಸವಾಲು ಹಾಕಿದರು.
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೋರಾಟ ಮಾಡಿ ಸರ್ಕಾರ ಬಂದಿದೆ. ಇಲ್ಲಿ ಯಾರಿಗೋ ಅಧಿಕಾರ ಕೊಡುತ್ತೇವೆ ಅನ್ನುವುದಲ್ಲ. ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡಬೇಕು ಎಂದು ಟಾಂಗ್ ನೀಡಿದರು.
ಆದರೆ ಎಲ್ಲೋ ಒಂದು ಕಡೆ ಅನವಶ್ಯಕ ಚರ್ಚೆ ಮಾಡ್ತಿದ್ದಾರೆ. ಸಿಎಂಗೆ ಅಧಿಕಾರ ಇದೆ. ಯಾರನ್ನು ಡಿಸಿಎಂ ಮಾಡಬೇಕು, ಯಾರನ್ನ ಸಚಿವರನ್ನಾಗಿ ಮಾಡಬೇಕು ಎಂಬ ಪರಮಾಧಿಕಾರ ಅವರಿಗಿದೆ. 33 ಸಚಿವರನ್ನು ಡಿಸಿಎಂ ಮಾಡಬಹುದು. ಇಷ್ಟೊಂದು ಅಧಿಕಾರದ ಆಸೆ ಇದ್ರೆ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಿ ಬಹುಮತ ತಂದು ಅಧಿಕಾರಕ್ಕೆ ಬರಲಿ ಎಂದು ಹೇಳಿದರು.
ಡಿಕೆಶಿಯನ್ನು ಸಿಎಂ ಮಾಡುವಂತೆ ಹೈಕಮಾಂಡ್ಗೆ ಶ್ರೀಗಳು ಪತ್ರ ಬರೆಯುವ ವಿಚಾರವಾಗಿ ಮಾತನಾಡಿ, ಸ್ವಾಮೀಜಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ. ಅದು ಸ್ವಾಮೀಜಿಯ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಅವರು ಸ್ವಾಮೀಜಿ ಆದ ತಕ್ಷಣ ಅವರಿಗೆ ವಾಕ್ ಸ್ವಾತಂತ್ರ್ಯ ಇಲ್ಲ ಅಂತಲ್ಲ. ಬೇರೆಯವರು ಮಾತನಾಡಬಹುದು. ಸ್ವಾಮೀಜಿ ಮಾತನಾಡಬಾರದಾ?. ಅವರ ಭಾವನೆಯನ್ನು ಅವರು ಹೊರ ಹಾಕಿದ್ದಾರೆ. 33 ಜನರೂ ಡಿಸಿಎಂ ಆಗಲಿ, ಯಾರು ಬೇಡ ಅಂದ್ರು?. ಚುನಾವಣೆಯ ಸಂದರ್ಭದಲ್ಲಿ ಜನಕ್ಕೆ ಕ್ಷೇತ್ರ ಅಭಿವೃದ್ಧಿ ಮಾಡ್ತೀವಿ ಎಂದು ಹೇಳಿರುತ್ತೇವೆ. ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಯೋಗ್ಯತೆ ಇಲ್ಲವೆಂದು ಹೇಳುವುದಾದರೆ ಚುನಾವಣೆಗೆ ಹೋಗುವುದು ವಾಸಿ: ಮತ್ತೊಂದೆಡೆ, ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕೆಂದು ಪರೋಕ್ಷವಾಗಿ ಹೇಳಿಕೆ ನೀಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣಗೆ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು. ಯಾರೂ ಶಾಶ್ವತ ಅಲ್ಲ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹೇಳಿಕೆ ಕೊಡುತ್ತಿರುವವರು ಹಿಂದೆ ತಿರುಗಿ ಅವರ ಬೆನ್ನು ನೋಡಿಕೊಳ್ಳಬೇಕು. ಉತ್ತಮ ಆಡಳಿತ ನಡೆಸಬೇಕೆಂದು ಡಿ.ಕೆ. ಶಿವಕುಮಾರ್‌ಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ. ಅವರಿಗೆ ಯೋಗ್ಯತೆ ಇಲ್ಲವೆಂದು ಹೇಳುವುದಾದರೆ ಚುನಾವಣೆಗೆ ಹೋಗುವುದು ವಾಸಿ. ನಾವೆಲ್ಲರೂ ಚುನಾವಣೆಗೆ ಹೋಗೋಣ ಎಂದು ಕೆ.ಎನ್. ರಾಜಣ್ಣಗೆ ಟಾಂಗ್ ಕೊಟ್ಟರು.
ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ಸ್ವಾಮೀಜಿಗಳ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಆ ಸ್ಥಾನ ಖಾಲಿಯಾದ ಮೇಲೆ ಆ ಹುದ್ದೆ ಚರ್ಚೆಗೆ ಬರುತ್ತದೆ ಎಂದರು.