ಬೆಂಗಳೂರು: ವಿಜಯ್ ಟಾಟಾನಿಂದ ಅನೇಕರಿಗೆ ಮೋಸವಾಗಿದ್ದು, ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರಮೇಶ್ ಗೌಡ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿಂದು ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿಗೌಡ ಸೇರಿ ಪಕ್ಷದ ವಿವಿಧ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಅನೇಕರಿಗೆ ವಿಜಯ್ ಟಾಟಾ ಮೋಸ ಮಾಡಿದ್ದಾನೆ. ಆತನ ವಿರುದ್ಧ ನೂರಾರು ಪ್ರಕರಣಗಳಿವೆ. ವಂಚನೆಯೇ ಆತನ ಪ್ರವೃತ್ತಿಯಾಗಿದ್ದು, ವಿಶೇಷ ತನಿಖೆ ನಡೆಯಬೇಕು ಎಂದರು.
ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.
ಸಿಎಂ ಕಚೇರಿ, ಕೆಲವು ಸಚಿವರ ಒತ್ತಡ: ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸ್ ದಾಖಲಿಸಲು ನನ್ನ ಮೇಲೆ ಸಿಎಂ ಕಚೇರಿ ಹಾಗೂ ಕೆಲ ಸಚಿವರಿಂದ ಒತ್ತಡವಿದೆ ಎಂದು ಪೊಲೀಸ್ ಠಾಣೆಯಲ್ಲಿ ಸ್ವತಃ ವಿಜಯ್ ಟಾಟಾ ನನಗೆ ಹೇಳಿದ್ದಾನೆ. ಬೇಕಿದ್ದರೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಿ ಎಂದು ಹೇಳಿದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ: ಉದ್ಯಮಿ ವಿಜಯ್ ಟಾಟಾ ವಿರುದ್ಧ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್ ನಿಯೋಗ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿತು. ಜೆಡಿಎಸ್ ಮಾಜಿ ಎಂಎಲ್‌ಸಿ ರಮೇಶ್ ಗೌಡ ನೇತೃತ್ವದಲ್ಲಿ ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಉದ್ಯಮಿಗೆ ಜೀವ ಬೆದರಿಕೆ ಆರೋಪ: ಹೆಚ್ಡಿಕೆ ವಿರುದ್ಧ ಎನ್ಸಿಆರ್ ದಾಖಲು - NCR Against H D Kumaraswamy