ಬೆಂಗಳೂರು: ಮೇ 1 ರ ಕಾರ್ಮಿಕ ದಿನಾಚರಣೆಗೆ 2 ದಿನಗಳ ಮುಂಚೆ ಖಾಸಗಿ ಸಂಸ್ಥೆಯೊಂದು 200 ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ಬಿಡುಗಡೆ ಮಾಡಿದ್ದು, ಅವರಿಗೆ ಸರ್ಕಾರ ನೆರವಾಗಬೇಕು ಎಂದು ಕೋರಿ ಮಾಜಿ ಸಚಿವ ಸುರೇಶ್ಕುಮಾರ್ ಅವರು ಕಾರ್ಮಿಕ ಸಚಿವ ಸಂತೋಷ್ಲಾಡ್ ಅವರಿಗೆ ಗುರುವಾರ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೋರಮಂಗಲದ ಓಲಾ ಕ್ಯಾಬ್ಸ್ (Ola Cabs) ಸಂಸ್ಥೆಯು ತನ್ನ 200 ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ. ಇದರಿಂದ ಆ ಸಿಬ್ಬಂದಿಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು. ಏನೂ ಕಾರಣ ನೀಡದೇ ಖಾಸಗಿ ಸಂಸ್ಥೆ ತನ್ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೈಬಿಡುವ ಮೂಲಕ ಕಾರ್ಮಿಕ ಕಾಯ್ದೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಮೇ 1 ರಂದು ಕಾರ್ಮಿಕ ದಿನವನ್ನು ಆಚರಣೆ ಮಾಡಲಾಗುತ್ತದೆ. ಕಾರ್ಮಿಕರ ಒಳತಿಗೋಸ್ಕರ, ಕಾರ್ಮಿಕರ ಕಲ್ಯಾಣದ ದೃಷ್ಟಿಯಿಂದ ಆ ದಿನವನ್ನು ಗುರುತಿಸಲಾಗಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಉದ್ದೇಶದಿಂದ ರೂಪಿಸಿರುವ ಕಾರ್ಯಕ್ರಮ ಇದಾಗಿದೆ. ಇಂತಹ ವಿಶೇಷ ದಿನಕ್ಕೂ ಮೊದಲು ಉದ್ಯೋಗಿಗಳನ್ನು ಖಾಸಗಿ ಸಂಸ್ಥೆ ಬಿಡುಗಡೆ ಮಾಡಿದ್ದಕ್ಕೆ ಸುರೇಶ್ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ನಿರ್ವಹಿಸಲಾಗುತ್ತಿರುವ ಓಲಾ ಕ್ಯಾಬ್ಸ್ ಕಾರ್ಮಿಕ ಕಾಯ್ದೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ. ಸಂಸ್ಥೆಯ ನಿರ್ಧಾರ ಸಹನೀಯವಲ್ಲ. ಯಾವುದೇ ತಪ್ಪು ಮಾಡದೆ ಬೀದಿಗೆ ಬಿದ್ದಿರುವ ಈ 200 ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು. ಎಲ್ಲರನ್ನೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ, ಸೂಕ್ತ ಪರಿಹಾರವನ್ನು ನೀಡಿ, ಅವರಿಗೆ ಗೌರವದ ವಿದಾಯ ನೀಡಬೇಕು. ಇದೇ ರೀತಿಯ ಕಾರ್ಮಿಕ ವಿರೋಧಿ ಪ್ರಕರಣಗಳು, ನಗರದಲ್ಲಿ ಹೆಚ್ಚಾಗುತ್ತಿವೆ. ಇಂತಹ ಘಟನೆಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ಬೆಂಡಾದ ಬೆಂಗಳೂರಿಗರು: ರಾಜ್ಯಾದ್ಯಂತ ಇನ್ನೂ ಒಂದು ವಾರ ಬಿಸಿ ಗಾಳಿ - Heatwave In Karnataka