ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರ್ಣಗೊಳಿಸಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ನಪಾಸಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಜೊತೆ ಚೆಲ್ಲಾಟ ಆಡಿರುವುದೇ ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಈ ವರ್ಷದ ವರದಿ ನೋಡಿದರೆ ಶಿಕ್ಷಣ ವ್ಯವಸ್ಥೆಯಲ್ಲಿ ನೂರು ಅಂಕಕ್ಕೆ 8-10 ಅಂಕವಷ್ಟೇ ನೀಡಬಹುದು. ವೇತನ ಕೊಟ್ಟಿದ್ದು ಬಿಟ್ಟು ಇವರು ಬೇರೇನೂ ಮಾಡಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅವರಿಗೆ ಸಂಭ್ರಮಾಚರಣೆ ಮಾಡಲಾಗಿಲ್ಲ. ಹಾಗಾಗಿ ನಾವೇ ಅವರ ಸಾಧನೆಯನ್ನು ಜನರ ಮುಂದಿಡುತ್ತೇವೆ. ಶಿಕ್ಷಣ ಇಲಾಖೆಯಡಿ ಮೊದಲ ಸಾಧನೆಯೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ನೀಡಿ ರಾಜ್ಯ ಶಿಕ್ಷಣ ನೀತಿ ತರುವುದಾಗಿ ತಿಳಿಸಿತ್ತು. ಆದರೆ, ಅದರಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಪದವಿ ವಿದ್ಯಾರ್ಥಿಗಳ ಜೀವನದ ಜೊತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಭವಿಷ್ಯ ಮಸುಕು ಮಾಡುತ್ತಿದೆ. ಐಸಿಎಸ್ಸಿ ಖಾಸಗಿ ಶಾಲೆಗಳು, ಖಾಸಗಿ ವಿವಿಗಳ ಬಗ್ಗೆ ಒಂದು ನೀತಿಯಾದರೆ.. ನಮ್ಮ ಸರ್ಕಾರಿ ಶಾಲೆಗಳಿಗೆ ಮತ್ತೊಂದು ನೀತಿಯಾಗಿದೆ. ಶಿಕ್ಷಣ ಸಮಿತಿಗಳನ್ನು ಸಮರ್ಥವಾಗಿ ಮುಂದುವರೆಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಫುಲ್ ಟೈಂ ಶಿಕ್ಷಣ ಮಂತ್ರಿಯೇ ನಮ್ಮ ರಾಜ್ಯದಲ್ಲಿ ಇಲ್ಲವಾಗಿದೆ. ಈ ರಾಜ್ಯಕ್ಕೆ ಫುಲ್ ಟೈಂ ಎಜುಕೇಷನ್ ಮಿನಿಸ್ಟರ್ ಅಗತ್ಯವಿತ್ತು. ಆದರೆ ಸಿಕ್ಕಿಲ್ಲ. ಚುನಾವಣೆಯಲ್ಲಿ ಅವರ ಸಹೋದರಿ ಗೆಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಈ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ಹಾಳುಗಡೆವಿದೆ. 5,8,9 ನೇ ತರಗತಿಗಳಿಗೆ ಮೌಲ್ಯಮಾಪನ ಮಾಡುತ್ತೇವೆ ಎಂದು ಈ ಸರ್ಕಾರ ಹೊರಟಿತು. ನ್ಯಾಯಾಲಯದವರೆಗೂ ಪ್ರಕರಣ ಹೋಗಿದೆ. ಕೋರ್ಟ್ ಈಗ ಫಲಿತಾಂಶಕ್ಕೆ ತಡೆ ನೀಡಿದೆ. ಎಳೆ ಮಕ್ಕಳ ಮನಸ್ಥಿತಿ, ಪೋಷಕರ ಆತಂಕವನ್ನು ಈ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳಿಗೆ ಮತಹಕ್ಕು ಇಲ್ಲದ ಕಾರಣ ಈ ತಾತ್ಸಾರವಾಗಿದೆ. ಮಕ್ಕಳು ಓಟ್ ಬ್ಯಾಂಕ್ ಅಲ್ಲ ಎಂದು ಈ ಧೋರಣೆ ತಳೆದಿದೆ. ಸಮಸ್ಯೆ ಪರಿಹರಿಸುವ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಮ್ಮ ಶಿಕ್ಷಣ ಸಚಿವರು ಮಾಡಲಿಲ್ಲ ಎಂದು ದೂರಿದರು.
ನಮ್ಮಲ್ಲಿ ಸಿಇಟಿ ವ್ಯವಸ್ಥೆ ಇದೆ. ಇಡೀ ದೇಶದಲ್ಲಿ ನಮ್ಮ ಸಿಇಟಿಗೆ ದೊಡ್ಡ ಹೆಸರಿತ್ತು. ಆದರೆ, ಆ ಸಿಇಟಿಯನ್ನು ಈ ಸರ್ಕಾರ ಹಾಳುಗೆಡವಿದೆ. ಸರ್ವರ್ ಸಮಸ್ಯೆ ಪರಿಹರಿಸಲಿಲ್ಲ. ಪ್ರವೇಶ ಪತ್ರ ಪಡೆಯಲು ಹರಸಾಹಸ ಪಡಬೇಕಾಯಿತು. ಒಂದು ಜಿಲ್ಲೆಯವರು ಮತ್ತೊಂದು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವಂತೆ ಮಾಡಲಾಯಿತು. ಕಾರಣ ಕೇಳಿದರೆ ಪರೀಕ್ಷಾ ಅಕ್ರಮ ತಡೆಗೆ ಎಂದರು. ಅವರ ಪ್ರಕಾರ ಚುನಾವಣಾ ಅಕ್ರಮ ತಡೆಗೆ ಮಲ್ಲೇಶ್ವರ ಮತದಾರರನ್ನು ಬೇರೆ ಕಡೆ ಮತ ಹಾಕಿಸಬೇಕು ಎನ್ನುವಂತಿದೆ. 240 ಪ್ರಶ್ನೆಗಳಲ್ಲಿ 59 ಪ್ರಶ್ನೆಗಳು ಔಟ್ ಆಫ್ ಸಿಲಬಸ್ ಇದೆ. ಮಕ್ಕಳ ಜೊತೆ ಯಾಕೆ ಚೆಲ್ಲಾಟ ಆಡುತ್ತಾರೆ. ಕೆಇಎ ಅಧಿಕಾರಿಗಳ ಧೋರಣೆ ವಿದ್ಯಾರ್ಥಿಗಳ ವಿರೋಧಿ ಧೋರಣೆಯಾಗಿದ್ದು, ಕಡೆಗೆ ಕೃಪಾಂಕ ನೀಡುವುದಾಗಿ ತಿಳಿಸಿತು. ಕೆಇಎ ಅಧಿಕಾರಿಗಳ ಉದ್ದಟತನಕ್ಕೆ ಕಡಿವಾಣ ಹಾಕುವ ಪ್ರಯತ್ನ ಈ ಸರ್ಕಾರ ಮಾಡಲಿಲ್ಲ. ಮಕ್ಕಳ ಕನಸಿಗೆ ಕಲ್ಲುಹಾಕುವ ಕೆಲಸವನ್ನು ಈ ಸರ್ಕಾರ ಯಶಸ್ವಿಯಾಗಿ ಮಾಡಿದೆ ಎಂದರು.
ಯಾವ ರೀತಿ ಪರೀಕ್ಷೆ ಮಾಡಬಾರದು ಎನ್ನುವುದಕ್ಕೆ ಮೊನ್ನೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ದೇಶಕ್ಕೆ ಒಳ್ಳೆಯ ಉದಾಹರಣೆ. ಮೂರು ಪರೀಕ್ಷೆ ಮಾಡಿ ಮಕ್ಕಳ ಸೀರಿಯಸ್ನೆಸ್ ಹಾಳು ಮಾಡುತ್ತಿದ್ದಾರೆ. ವೆಬ್ ಕ್ಯಾಸ್ಟಿಂಗ್ ಮಾಡಿದರು, ಕ್ಯಾಮೆರಾ ಮುಂದೆ ಪರೀಕ್ಷೆ ಬರೆಯಬೇಕು, ಪರೀಕ್ಷಾ ಮೇಲ್ವಿಚಾರಕರು ಇದನ್ನು ನೋಡಿಕೊಳ್ಳಬೇಕು, ಕ್ಯಾಮೆರಾ ಅಲ್ಲ, ಈ ಪದ್ದತಿಯಿಂದ 30 ಪರ್ಸೆಂಟ್ ಫಲಿತಾಂಶ ಕುಸಿಯಿತು. ಇದನ್ನು ಸರಿದೂಗಿಸಲು ಕೃಪಾಂಕ ನೀಡಲಾಯಿತು. 15 ಸಾವಿರ ಜನ ಜಿಪಿಟಿ ಟೀಚರ್ಸ್ ನೇಮಕಾತಿಗೆ ಮುಂದಾಗಿದೆ. ಆದರೆ ಫೈನಲ್ ಮಾಡದೇ ಶಿಕ್ಷಕರ ಕೊರತೆ ಸೃಷ್ಟಿಯಾಗಿದೆ. ಈಗ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಇದೂವರೆತೆ ಅಧಿಕೃತ, ಅನಧಿಕೃತ ಶಾಲೆ ಯಾವುದು ಎನ್ನುವ ಪಟ್ಟಿ ಪ್ರಕಟಿಸಿಲ್ಲ. ಎಲ್ಲ ಡಿಸಿಪಿಐಗೆ ಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದರೂ ಇದೂವರೆಗೂ ಪಟ್ಟಿ ಪ್ರಕಟಿಸಿಲ್ಲ ಎಂದರು.
ಕೆಲ ಶಾಲೆಗಳು ಶೈಕ್ಷಣಿಕ ವರ್ಷಾರಂಭಕ್ಕೂ ಮೊದಲೇ ಆರಂಭಿಸುತ್ತವೆ. ಶುಲ್ಕಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಬಹಳಷ್ಟು ಖಾಸಗಿ ಶಾಲೆಗಳು ಇದೇ ರೀತಿ ಮಾಡುತ್ತಿವೆ. ಆದರೆ ಕಡಿವಾಣ ಹಾಕಲಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಏನಾಗಿದೆ ಯಾರಿಗೂ ಗೊತ್ತಿಲ್ಲ. ಹೊಸ ಪುಸ್ತಕ ಯಾವಾಗ ಬರಲಿದೆ ಗೊತ್ತಿಲ್ಲ. ಅದರಲ್ಲಿನ ತಪ್ಪುಗಳ ಬಗ್ಗೆ ಗೊತ್ತಿಲ್ಲ. ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ಏಟು ಬೀಳಿತ್ತಿದೆ. ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದರು.
ಶಾಲೆಗಳಲ್ಲಿ ಪೋಕ್ಸೋ ಸಮಿತಿ ರಚಿಸಬೇಕು ಎಂದರೂ ಆ ಕೆಲಸ ಮಾಡಲಿಲ್ಲ. ಶಾಲಾ ಬಸ್, ಸುರಕ್ಷತೆ ಬಗ್ಗೆ ಗಮನ ಹರಿಸಿಲ್ಲ. ಅವರಿಗೆಲ್ಲಾ ತಮ್ಮ ಖ್ಯಾತೆಯೇ ಮುಖ್ಯವಾಗಿದೆ. ರಾಜ್ಯದ ಜನತೆ ಇದನ್ನು ಕ್ಷಮಿಸಲ್ಲ ಎಂದರು.
ಓದಿ: 'ಕೇಂದ್ರದಿಂದ ಹಣ ಬಂದರೆ ಇನ್ನುಳಿದ ರೈತರಿಗೆ ಪರಿಹಾರ ಬಿಡುಗಡೆ': ಸತೀಶ್ ಜಾರಕಿಹೊಳಿ - Satish Jarkiholi