ಬೆಂಗಳೂರು: ಸಂಜಯನಗರದ ಆರ್ಎಮ್ವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ಕಳ್ಳರು ಕನ್ನ ಹಾಕಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಾಣೆಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಮನೆಯ ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿ ನಾಪತ್ತೆಯಾಗಿರುವುದು ಅನುಮಾನ ಮೂಡಿಸಿದೆ.
ಏಪ್ರಿಲ್ 18ರಂದು ನಾರಾಯಣಸ್ವಾಮಿ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದರು. ಪತ್ನಿ ಹಾಗೂ ಮಗ ತಮಿಳುನಾಡಿನ ತಿರುವಣ್ಣಾಮಲೈಗೆ ಪ್ರಯಾಣ ಬೆಳೆಸಿದ್ದರು. ರಾತ್ರಿ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ 99.75 ಲಕ್ಷ ರೂ ಮೌಲ್ಯದ 1,425 ಗ್ರಾಂ ಚಿನ್ನಾಭರಣ, 18.92 ಲಕ್ಷ ರೂ ಮೌಲ್ಯದ 22 ಕೆ.ಜಿ ಬೆಳ್ಳಿಯ ವಸ್ತುಗಳು, 6.50 ಲಕ್ಷ ಮೌಲ್ಯದ 3 ವಾಚ್ಗಳು, 4 ಲಕ್ಷ ನಗದು ಸೇರಿದಂತೆ ಒಟ್ಟು 1.29 ಕೋಟಿ ರೂ ಮೌಲ್ಯದಷ್ಟು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಆರ್.ನಾರಾಯಣ ಸ್ವಾಮಿ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿಗಾಗಿ ಹುಡುಕಾಟ ಆರಂಭಿಸಿರುವುದಾಗಿ ತಿಳಿಸಿದ್ದಾರೆ.