ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಗೆ ವಿಶ್ವಮಾನ್ಯತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ವಿಶ್ರಾಂತ ಜೀವನ ನಡೆಸುವ ಬದಲು ರಾಜಕೀಯ ಚದುರಂಗದಾಟದಲ್ಲಿ ತೊಡಗುವ ನಿರ್ಧಾರಕ್ಕೆ ಬಂದಿದ್ದಾರೆ. ನಾಳೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದು, ಅದಕ್ಕೂ ಮುನ್ನ ಇಂದು ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಡಾ. ಸಿ ಎನ್ ಮಂಜುನಾಥ್ ಭೇಟಿ ನೀಡಿದರು. ನಿವಾಸಕ್ಕೆ ಬಂದ ಮಂಜುನಾಥ್ರನ್ನು ಯಡಿಯೂರಪ್ಪ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರು ಉಭಯ ಕುಶಲೋಪರಿ ನಂತರ ರಾಜಕೀಯ ವಿಚಾರದ ಕುರಿತು ಕೆಲಕಾಲ ಮಾತುಕತೆ ನಡೆಸಿದರು.
ವೈದ್ಯಕೀಯ ಸೇವೆಯ ನಂತರ ರಾಜಕೀಯ ಕ್ಷೇತ್ರದ ಮೂಲಕ ಮತ್ತೊಮ್ಮೆ ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗುವ ಅಪೇಕ್ಷೆಯಂತೆ ರಾಜಕೀಯಕ್ಕೆ ಬರುತ್ತಿರುವ ಕುರಿತು ಚರ್ಚಿಸಿದರು. ಈಗಾಗಲೇ ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿಯಾಗಲಿದ್ದಾರೆ. ಮಂಡ್ಯ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಗಳ ನಡುವೆ ಡಾ. ಮಂಜುನಾಥ್ ನಾಳೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದರು.
ರಾಜಕೀಯ ಜೀವನಕ್ಕೆ ಪ್ರವೇಶ ಮಾಡುತ್ತಿರುವ ಮಂಜುನಾಥ್ ಅವರಿಗೆ ಶುಭ ಕೋರಿದ ಯಡಿಯೂರಪ್ಪ, ಯಶಸ್ವಿ ವೈದ್ಯಕೀಯ ಜೀವನ ನಡೆಸಿದ ನಿಮಗೆ ಯಶಸ್ವಿ ರಾಜಕೀಯ ಜೀವನ ನಡೆಸುವ ಅವಕಾಶ ಸಿಗಲಿ ಎಂದು ಹಾರೈಸಿದರು.
ಈಗಾಗಲೇ ಮಂಜುನಾಥ್ ಅವರಿಗೆ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸಿದ್ದು, ಈ ವಿಚಾರವನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಖಚಿತಪಡಿಸಿದ್ದಾರೆ. ಮಂಜುನಾಥ್ ವಿಚಾರದಲ್ಲಿ ಚರ್ಚೆಯಾಗಿದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ನೀಡುವ ಕುರಿತು ಚಿಂತನೆ ಇದೆ ಎಂದು ಇಂದು ಬೆಳಗ್ಗೆ ಮಾಧ್ಯಮದವರಿಗೆ ಹೇಳಿದ್ದರು.
ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಒಪ್ಪಿಗೆ, ನಾಳೆ ಬಿಜೆಪಿ ಸೇರ್ಪಡೆ : ಆರ್ ಅಶೋಕ್