ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪಕ್ಷದ ಹಿರಿಯ ನಾಯಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಎರಡನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಇಂದು ಕಡೆಯ ದಿನವಾಗಿತ್ತು. ಆದರೆ, ಬಂಡಾಯ ಅಭ್ಯರ್ಥಿಯಾಗಿಯೇ ಕಣದಲ್ಲಿ ಉಳಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ.
''ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ'' ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್ಗೆ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಈಶ್ವರಪ್ಪ, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಶಿವಮೊಗ್ಗಕ್ಕೆ ತೆರಳಿ ಈಶ್ವರಪ್ಪ ಮನವೊಲಿಕೆ ಮಾಡಲು ಯತ್ನಿಸಿದರೂ ಸಫಲರಾಗಲಿಲ್ಲ.
ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಇದೆ, ಗೋ ಬ್ಯಾಕ್ ಅಭಿಯಾನಕ್ಕೆ ಗುರಿಯಾದ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಕೊಡಿಸಿದ್ದಾರೆ. ಪಕ್ಷ ಬಿಟ್ಟು ಮತ್ತೆ ವಾಪಸ್ಸಾದ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಕರೆತಂದು ಅವರಿಗೂ ಟಿಕೆಟ್ ನೀಡಲಾಗಿದೆ. ಪಕ್ಷ ನಿಷ್ಟರಾದ ನಮಗೆ ಅನ್ಯಾಯ ಮಾಡಲಾಗಿದೆ, ಹೈಕಮಾಂಡ್ ಮೇಲೆ ಒತ್ತಡ ತಂದು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಲಾಗಿದೆ. ಒಬ್ಭ ಮಗ ಸಂಸದ, ಮತ್ತೊಬ್ಬ ಶಾಸಕ ಎಲ್ಲಾ ಅಧಿಕಾರ ಅವರ ಕುಟುಂಬಕ್ಕೆ ಬೇಕಾ? ಎಂದು ಆರೋಪಿಸಿದ್ದ ಈಶ್ವರಪ್ಪ, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಈ ವೇಳೆ ಅಮಿತ್ ಶಾ ದೆಹಲಿಗೆ ಈಶ್ವರಪ್ಪ ಅವರನ್ನು ಕರೆಸಿಕೊಂಡರೂ ಮಾತುಕತೆ ನಡೆಸಿರಲಿಲ್ಲ. ಹಾಗಾಗಿ ಬರಿಗೈಲಿ ವಾಪಸ್ಸಾಗಿದ್ದ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಆದರೂ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎನ್ನುವ ನಿರೀಕ್ಷೆ ಬಿಜೆಪಿ ನಾಯಕರಲ್ಲಿ ಇತ್ತು. ಹಾಗಾಗಿ ಕಾದು ನೋಡುವ ತಂತ್ರ ಅನುಸರಿಸಿದ್ದ ಬಿಜೆಪಿ ಹೈಕಮಾಂಡ್ ಇಂದು ನಾಮಪತ್ರ ವಾಪಸ್ ಪಡೆಯುವ ಕಾಲಾವಕಾಶ ಮುಗಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಂಡಿದೆ. ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಕಬ್ಬಿನ ರೈತ ಈಶ್ವರಪ್ಪನವರ ಗುರುತು: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪನವರಿಗೆ ಕಬ್ಬಿನ ಜೊತೆ ರೈತ ಇರುವ ಗುರುತನ್ನು ಚುನಾವಣಾ ಆಯೋಗದಿಂದ ನೀಡಲಾಗಿದೆ. ಈಶ್ವರಪ್ಪನವರು ಈ ಗುರುತಿನೊಂದಿಗೆ ಚುನಾವಣಾ ಪ್ರಚಾರ ನಡೆಸಬಹುದಾಗಿದೆ.
ಇದನ್ನೂ ಓದಿ: ಜೋಶಿ ವಿರುದ್ಧ ನನ್ನ ಧರ್ಮಯುದ್ಧ, ಜಯ ಸಿಗುವವರೆಗೂ ಮಾಲೆ ಧರಿಸಲ್ಲ: ದಿಂಗಾಲೇಶ್ವರ ಶ್ರೀ - Dingaleshwar Swamiji