ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಅವ್ಯವಹಾರ ಹಗರಣಕ್ಕೆ ಸಂಬಂಧಿಸಿ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು. ಇದರ ಹೊಣೆ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ನಿನ್ನೆಯೇ ಬೆಂಗಳೂರಿನ ಸಿಬಿಐ ಕಚೇರಿಗೆ ದೂರು ಕೊಟ್ಟಿದೆ. ಅದರನ್ವಯ ಸಿಬಿಐ ತನಿಖೆ ನಡೆಯಲಿ ಎಂದೂ ಒತ್ತಾಯಿಸಿದರು. ನಿಗಮದ ಅವ್ಯವಹಾರ ಹಗರಣಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ದೂರಿದರು. ನಕಲಿ ಖಾತೆ ತೆರೆದು, ಕ್ರಿಯಾ ಯೋಜನೆ ಇಲ್ಲದೇ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ನಿಗಮದ ಈ ಅವ್ಯವಹಾರವು ಪರಿಶಿಷ್ಟ ಪಂಗಡಕ್ಕೆ ಆಗಿರುವ ಅನ್ಯಾಯ ಎಂದು ತಿಳಿಸಿದರು. ನೇರ ಹೊಣೆಯಾಗಿರುವ ಮುಖ್ಯಮಂತ್ರಿಗಳಿಗೆ ಇನ್ನೂ ಧ್ವನಿಯೇ ಬಂದಿಲ್ಲ. ಎಲ್ಲಿ ಧ್ವನಿ ಅಡಗಿ ಹೋಗಿದೆಯೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಹಣ ತೆಲಂಗಾಣದ ಯಾರ ಖಾತೆಗೆ ಹೋಗಿದೆ? ಯಾರು ಆ ವ್ಯಕ್ತಿಗಳು? ಎಂದ ಅವರು, ಸಚಿವರು ಹಣವನ್ನು ನೇರವಾಗಿ ದರೋಡೆ ಮಾಡಿದ್ದಾಗಿ ಆಪಾದಿಸಿದರು.
ದಾಖಲಾದ ಎಫ್ಐಆರ್ನಲ್ಲಿ ಮಂತ್ರಿ ಮೇಲೆ ಕೇಸಿಲ್ಲ; ಅಧಿಕಾರಿ ಮೇಲೆ ಕೇಸಿಲ್ಲ. ಬರೀ ಬ್ಯಾಂಕ್ ಅಧಿಕಾರಿ ಮೇಲೆ ಪ್ರಕರಣ ದಾಖಲಾಗಿದೆ. ಇದೇನು ಇಲಾಖೆ? ಎಂಥ ಕಾಮಿಡಿ ಇದು? ಇದು ಭಂಡತನದಿಂದ ಕೂಡಿದೆ ಎಂದು ಅವರು ದೂರಿದರು. ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪ್ರತಿಕ್ಷಣ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ ಅಶ್ವತ್ಥನಾರಾಯಣ, ಸರ್ಕಾರ ಖಜಾನೆ ರಕ್ಷಿಸುವ ಬದಲು ನೇರವಾಗಿ ಖಜಾನೆಗೆ ಕೈ ಹಾಕಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರವು ಅಧಿಕಾರ ದಾಹ, ಭ್ರಷ್ಟಾಚಾರದಲ್ಲಿ ತೊಡಗಿ, ಪ್ರತಿನಿತ್ಯ ಅವರನ್ನು ಬಯಲಿಗೆ ಎಳೆಯುವಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದು, ಹಣ ದುರ್ಬಳಕೆ ಹಗರಣ ಸಂಬಂಧ ಸಚಿವರು, ಉನ್ನತಾಧಿಕಾರಿಗಳ ವಿರುದ್ಧ ಆಪಾದನೆ ಮಾಡಿದ್ದಾರೆ. ಇದನ್ನು ಡೆತ್ ನೋಟಿನಲ್ಲಿ ಬರೆದಿದ್ದರೂ ಎಫ್ಐಆರ್ನಲ್ಲಿ ಯೂನಿಯನ್ ಬ್ಯಾಂಕಿನವರನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದೊಂದು ಕೆಟ್ಟ ಸರ್ಕಾರ, ದುಷ್ಟ ಸರ್ಕಾರ ಮಾತ್ರವಲ್ಲದೇ ಭ್ರಷ್ಟ ಸರ್ಕಾರ ಎಂದು ಆಪಾದಿಸಿದ ಅಶ್ವತ್ಥನಾರಾಯಣ, ಈ ಸರ್ಕಾರ ಬಂದ ಮೇಲೆ ಬರೀ ಡೆತ್ ನೋಟ್ಗಳೇ ಬರುತ್ತಿದೆ. ಕೆಆರ್ಡಿಎಲ್ ಗುತ್ತಿಗೆದಾರ ಒಬ್ಬರು ನಿನ್ನೆ ಬಿಲ್ ಬಾಕಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ ಸರ್ಕಾರ ಕಿರುಕುಳ ಕೊಡುತ್ತಿದೆ. ಸರ್ಕಾರ ಬೆಳಗ್ಗೆ ಎದ್ದರೆ ನಿಂತಿರುವುದೇ ಲೂಟಿ ಹೊಡೆಯಲು. ಇವರಿಗೆ ಐವತ್ತು ವರ್ಷಗಳ ಅನುಭವ ಬೇರೆ! ನಾಲ್ಕು ದಿನ ಆದರೂ ಇವರಿಗೆ ಗೊತ್ತಾಗಿಲ್ಲ ಅಂತಾದರೆ ಇವರೇನು ಮುಖ್ಯಮಂತ್ರಿನಾ? ಎಲ್ಲರೂ ಮಹಾಪುರುಷರು. ಆ ಗೃಹ ಮಂತ್ರಿಗೆ ಕೈ ಮುಗಿಯಬೇಕು. ಡಿಸಿಎಂಗೆ ದೊಡ್ಡ ನಮಸ್ಕಾರ ಹಾಕಬೇಕು. ಈ ಸಿಎಂಗೆ ಅಡ್ಡ ಬೀಳಬೇಕು. ಎಲ್ಲರೂ ಹಗಲು ದರೋಡೆಕೋರರೇ ಇದ್ದಾರೆ. ಆರ್ಥಿಕ ಇಲಾಖೆಯ ಮೊದಲ ಹೊಣೆಗಾರಿಕೆ ಇರುವುದೇ ಸಿಎಂ ಮೇಲೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿ: ಬೊಮ್ಮಾಯಿ - Former CM Bommai