ಹುಬ್ಬಳ್ಳಿ: "ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ. ಸ್ಪರ್ಧಿಸಬೇಡಿ ಪಕ್ಷದ ಸೇವೆ ಮಾಡಿ ಎಂದರೆ ಅದಕ್ಕೂ ಸಿದ್ಧನಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, "ಈ ಬಗ್ಗೆ ವರಿಷ್ಠರು ಯಾರು ನನ್ನ ಬಳಿ ಚರ್ಚೆ ಮಾಡಿಲ್ಲ, ನಾನು ಯಾರ ಬಳಿ ಚರ್ಚಿಸಿಲ್ಲ" ಎಂದು ಹೇಳಿದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಡಿ ಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ವಿಚಾರ ಸರಿಯಲ್ಲ. ಯಾರೇ ಆಗಲಿ ಲಕ್ಷ್ಮಣ ರೇಖೆಯನ್ನು ದಾಟಬಾರದು ಎಂದರು. ಅದಲ್ಲದೇ ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಲೇ 30 - 40 ವರ್ಷ ಕಾಂಗ್ರೆಸ್‌ನವರು ಸರ್ಕಾರ ನಡೆಸಿಕೊಂಡು ಬಂದಿದ್ದಾರೆ. ಬಿಜೆಪಿಯವರು ಗಾಂಧಿ ಹಂತಕರು ಎಂದು ಹೇಳುವುದು ಸರಿಯಲ್ಲ. ಅದನ್ನೇ ಪದೇ ಪದೇ ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ" ಎಂದರು.
ಶುಕ್ರವಾರ ರಾತ್ರಿ ನಡೆದ ಸಭೆ ಬಗ್ಗೆ ಮಾತನಾಡಿದ ಅವರು, "ಎಲ್ಲರನ್ನೂ ಒಗ್ಗೂಡಿಸಿಕೊಂಡು ಹುಬ್ಬಳಿ- ಧಾರವಾಡದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಲೋಕಸಭಾ ಚುನಾವಣೆಯ ಬಗ್ಗೆ ಇಲ್ಲಿ ಚರ್ಚೆ ನಡೆಸಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಕೆಲಸ ಬೇಡ: ಬಿ ಎಸ್ ಯಡಿಯೂರಪ್ಪ
ಕ್ಷೇತ್ರದಲ್ಲಿ ಶೆಟ್ಟರ್ ಸಂಚಾರ: ಇತ್ತೀಚೆಗೆ ಶೆಟ್ಟರ್ ಕಾಂಗ್ರೆಸ್ ಪಕ್ಷದಿಂದ ಮರಳಿ ಬಿಜೆಪಿ ಮರು ಸೇರ್ಪಡೆಯಾದ ಬಳಿಕ ಧಾರವಾಡ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ಈ ಹಿಂದೆ ಶೆಟ್ಟರ್ ಪಕ್ಷ ತೊರೆದಾಗ ಅವರ ವಿರುದ್ದ ಹರಿಹಾಯ್ದ ಬಿಜೆಪಿ ನಾಯಕರು, ಇದೀಗ ಪಕ್ಷಕ್ಕೆ ಮರಳುತ್ತಿದ್ದಂತೆ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ, ಜಿಲ್ಲೆಯಲ್ಲಿ ಲೋಕಸಭೆ ಚುನಾವಣಾ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಇದ್ದಾರೆ. ಆದ್ರೆ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಶೆಟ್ಟರ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವಂತಿದೆ. ಚುನಾವಣೆಗೂ ಮುನ್ನವೇ ಪ್ರತ್ಯೇಕ ಪ್ರಚಾರ ಜೋರಾಗಿದೆ.
ಧಾರವಾಡ ಲೋಕಸಭೆ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಹಾಲಿ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶೆಟ್ಟರ್ ನಡುವೆಯೇ ಪೈಪೋಟಿ ಇರುವಂತೆ ಭಾಸವಾಗುತ್ತಿದೆ. ಕುಂದಗೋಳ ತಾಲೂಕು ಸೇರಿ ಹಲವೆಡೆ ಶೆಟ್ಟರ್ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಖುದ್ದು ಶೆಟ್ಟರ್ ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ಮುಂಚೆ ಸೆಂಟ್ರಲ್ ಕ್ಷೇತ್ರಕ್ಕೆ ಮಾತ್ರ ಶೆಟ್ಟರ್ ಸೀಮಿತವಾಗಿದ್ದರು. ಈಗ ಎಂಟು ಕ್ಷೇತ್ರಗಳತ್ತ ಶೆಟ್ಟರ್ ಚಿತ್ತ ನೆಟ್ಟಿರುವಂತಿದೆ.