ಬೆಳ್ತಂಗಡಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ ವೀರೇಂದ್ರ ಹೆಗ್ಗಡೆಯವರ ಜೊತೆಯಲ್ಲಿ ಮಂಜುನಾಥ ದೇವರ ದರ್ಶನ ಪಡೆದಿದ್ದಾರೆ. ನಂತರ ದೇವಾಲಯದಲ್ಲಿ ವೀರೇಂದ್ರ ಹೆಗ್ಗಡೆಯವರು ಯಡಿಯೂರಪ್ಪ ಅವರನ್ನು ಗೌರವಿಸಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, "ಬಹಳ ವರ್ಷಗಳ ನಂತರ ಸ್ನೇಹಿತರ ಜೊತೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ನಮ್ಮೂರಲ್ಲಿ ಬರಗಾಲವಿದೆ. ಊರಲ್ಲಿ ಮಳೆಯಾಗಿ ಸಮೃದ್ಧಿಯಿಂದ ಬೆಳೆಯಾಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿದ್ದೇನೆ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ದೇವರ ದರ್ಶನ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಸೇರಿದಂತೆ ಇನ್ನು ಅನೇಕರು ಜೊತೆಯಲ್ಲಿದ್ದರು.
ಇದಾದ ಬಳಿಕ, ಯಡಿಯೂರಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಈ ವೇಳೆ ಬಿಎಸ್ವೈ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಸುಬ್ರಹ್ಮಣ್ಯಕ್ಕೆ ಬಂದ ಯಡಿಯೂರಪ್ಪರನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಶಾಲು ಹೊದಿಸಿ, ಹೂಗುಚ್ಚ ನೀಡಿ ಸ್ವಾಗತಿಸಿದರು.
ಹಾಗೇ ದೇವಸ್ಥಾನದ ವತಿಯಿಂದಲೂ ದೇಗುಲದ ಅಧಿಕಾರಿಗಳು ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು. ಮಧ್ಯಾಹ್ನ ಸುಳ್ಯಕ್ಕೆ ಆಗಮಿಸುವ ಯಡಿಯೂರಪ್ಪರು, ಸುಳ್ಯದಲ್ಲಿ ನಿರ್ಮಾಣವಾದ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸುಮಾರು 3 ಗಂಟೆಗಳ ವೇಳೆಗೆ ಗುಂಡ್ಯ, ಸಕಲೇಶಪುರ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯಕ್ಕೆ ಒಂದೇ ಒಂದು ಕೈಗಾರಿಕೆ ಬರಲಿಲ್ಲ : ಬಿ ವೈ ವಿಜಯೇಂದ್ರ - Sandur Industrial Zone