ಬೆಂಗಳೂರು: ''ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ತರುವ ಮೂಲಕ ಕೇಂದ್ರ ಹಾಗೂ ರಾಜ್ಯದ ನಡುವೆ ಸಂಘರ್ಷ ಉಂಟುಮಾಡಿ ರಾಜ್ಯಕ್ಕೆ ದ್ರೋಹ ಮಾಡಲಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ''ರಾಜ್ಯ ಸರ್ಕಾರ ವಿಧಾನಮಂಡಲದ ಇತಿಹಾಸದಲ್ಲಿ ಹಿಂದೆಂದೂ ಮಾಡದ ಪ್ರಮಾದ ಮಾಡಿದೆ. ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ. ಸುಳ್ಳು ಲೆಕ್ಕಾಚಾರ ಕೊಟ್ಟು ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ 50 ವರ್ಷ ಆಳುವಾಗ ಆದ ಅನ್ಯಾಯವನ್ನು ಸರಿಪಡಿಸಲು ದಶಕಗಳು ಬೇಕಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಕೋ ಆಪರೇಟಿವ್ ಫೆಡರಲಿಸಂ ಎಂಬ ನೀತಿಯಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ 32% ರಿಂದ 42% ಏರಿಸಿದೆ'' ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
''ದೇಶವನ್ನು ಅಧಿಕವಾಗಿ ಆಡಳಿತ ಮಾಡಿರುವುದು ಕಾಂಗ್ರೆಸ್. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ 20% ರಷ್ಟು ಕೂಟ್ಟಿದ್ದು ಶೇ 30 ಹೆಚ್ಚಿಸಲು ಸುದೀರ್ಘ ಹೋರಾಟ ರಾಜ್ಯ ಮಾಡಬೇಕಾಯಿತು. ಶೇ 30% ರಿಂದ ಶೇ 40% ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು'' ಎಂದು ದೂರಿದರು.
''15ನೇ ಹಣಕಾಸು ಆಯೋಗದ ಮಧ್ಯಂತರ ವರದಿ ಪ್ರಕಾರ ಅನುದಾನ ಬರಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮಧ್ಯಂತರ ವರದಿ ಕಾನೂನು ಬದ್ಧವಲ್ಲ. ಆಯೋಗದ ಅಂತಿಮ ವರದಿಯಲ್ಲಿ ಯಾವುದೇ ಶಿಫಾರಸು ಮಾಡಿಲ್ಲ. ಆದರೆ, ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಬೇಕು ಎಂದು ಹೇಳುತ್ತಿದ್ದಾರೆ. ಆಯೋಗ ಶಿಫಾರಸಿನಂತೆ ಆರು ಸಾವಿರ ಕೋಟಿ ರೂ. ರಾಜ್ಯಕ್ಕೆ ಬಂದೇ ಬರುತ್ತದೆ'' ಎಂದು ತಿಳಿಸಿದರು.
''ಮೆಟ್ರೋಗೆ ಕೇಂದ್ರ ಸರ್ಕಾರ 50% ಕೊಡುತ್ತೆ, ಆದ್ರೆ ಅದರ ಬಗ್ಗೆ ಮಾತನಾಡಲ್ಲ. ಆಯುಷ್ಮಾನ ಭಾರತದಿಂದ 60 ಲಕ್ಷ ಮಂದಿಗೆ ಲಾಭ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಲಾಭ ಆಗಿದೆ, ಅದರ ಬಗ್ಗೆ ಮಾತನಾಡಲ್ಲ. ಸುಳ್ಳು ಹೇಳುವ ಭರದಲ್ಲಿ ಸತ್ಯ ಮರೆ ಮಾಚುತ್ತಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ಸುಳ್ಳು ಅಂಕಿ - ಅಂಶ ನೀಡುತ್ತಿದೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಎರಡು ವರ್ಷದಿಂದ 1,05,000 ಕೋಟಿ ರೂ. ಬಂದಿದೆ'' ಎಂದ ಅವರು, ರಾಜ್ಯ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಲು ರಾಜ್ಯಕ್ಕೆ ಹಿನ್ನಡೆ ಉಂಟು ಮಾಡುವ ಹೀನ ಕೆಲಸ ಮಾಡಿದೆ'' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 6 ವನ್ಯಜೀವಿ ಧಾಮಗಳನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವ ಹೊಸ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲು ಸಂಪುಟ ಒಪ್ಪಿಗೆ