ದಾವಣಗೆರೆ : ವೋಟು ಪಡೆಯಲು ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ, ಬರೆಯನ್ನು ಎಳೆದಿದೆ. ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದೆ. ರಾಜ್ಯವನ್ನ 10 ವರ್ಷ ಹಿಂದಕ್ಕೆ ತಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಳಿಕ ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಡವರ, ಜನ ಸಾಮಾನ್ಯರ ವಿರೋಧಿ ನಿಲುವನ್ನು ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ನಡೆಸುತ್ತಿದೆ. 1 ಲಕ್ಷ 5 ಸಾವಿರ ಕೋಟಿ ಸಾಲದ ಹೊರೆಯನ್ನು ರಾಜ್ಯದ ಜನತೆ ಮೇಲೆ ಹೊರಿಸಿದ್ದಾರೆ ಎಂದರು.
ಮೊದಲು ಮೋಟರ್ ಟ್ಯಾಕ್ಸ್, ಮದ್ಯದ ದರ ಹೆಚ್ಚು ಮಾಡಿ, ಸ್ಟ್ಯಾಂಪ್ ತೆರಿಗೆ, ಈಗ ಪೆಟ್ರೋಲ್ ದರ ಹೆಚ್ಚು ಮಾಡಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ರಾಜ್ಯವನ್ನು ಆಳುವ ನೈತಿಕತೆ ಇಲ್ಲ. ಅಭಿವೃದ್ಧಿ ಶೂನ್ಯ, ಅಭಿವೃದ್ದಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಕರ್ನಾಟಕದ ಜನ ಶಾಪ ಹಾಕುತ್ತಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆ ಆಗಿದ್ದರಿಂದ ಬಡ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು : ರಿಯಲ್ ಎಸ್ಟೇಟ್ ಮಾಫಿಯಾಗೆ ರಾಜ್ಯ ಸರ್ಕಾರದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ ಡೀಲ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಕರ್ನಾಟಕ ಆಳುವ ನೈತಿಕತೆಯನ್ನು ಕಳೆದುಕೊಂಡಿದ್ದು, ಅವರು ರಾಜೀನಾಮೆ ಕೊಡಬೇಕು. ರಾಜ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೋವಿಡ್ ನಂತರ ನಾನು ಮುಖ್ಯಮಂತ್ರಿ ಆಗಿದ್ದಾಗ ಪೆಟ್ರೋಲ್ ಸೆಸ್ ಕಡಿಮೆ ಮಾಡಿದ್ದೆ. ಬೇರೆ ರಾಜ್ಯದ ಪೆಟ್ರೋಲ್ ಬೆಲೆಯನ್ನು ತೋರಿಸಿ ಸಮರ್ಥಿಸಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಬೊಮ್ಮಾಯಿ ಹರಿಹಾಯ್ದರು.
ನಮ್ಮ ರಾಜ್ಯದ ಹಣದುಬ್ಬರ ರಾಷ್ಟ್ರದ ಹಣದುಬ್ಬರಕ್ಕಿಂತ ಹೆಚ್ಚಿದೆ. ಆಯಿಲ್ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತದೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಬೆಲೆ ಹೆಚ್ಚಳ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಬಹಳ ದೊಡ್ಡ ರಾಜಕೀಯ ಬೆಳವಣಿಗೆ ಆಗಲಿದೆ: ಮುಂದಿನ ದಿನಗಳಲ್ಲಿ ಬಹಳ ದೊಡ್ಡ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಇದೇ ವೇಳೆ ಭವಿಷ್ಯ ನುಡಿದರು.
ಗೋವಿಂದ ಕಾರಜೋಳ ಬಿಜೆಪಿಯ ಹಿರಿಯ ಮುಖಂಡರಾಗಿದ್ದಾರೆ. ಬಹಳ ವರ್ಷದಿಂದ ರಾಜಕಾರಣದಲ್ಲಿದ್ದಾರೆ. ಮುತ್ಸದ್ಧಿ ರಾಜಕಾರಣಿ. ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ಅವರ ಹೇಳಿಕೆಯಲ್ಲಿ ಸತ್ಯಾಂಶವಿರುತ್ತದೆ. ಅವರು ಪಕ್ಕ ಮಾಹಿತಿ ಇಟ್ಟುಕೊಂಡೇ ಹೇಳಿರುತ್ತಾರೆ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ರಾಜಕೀಯ ಬೆಳವಣಿಗೆಯಾಗುತ್ತದೆ ಎಂದರು.
ಕಾಂಗ್ರೆಸ್ ಶಾಸಕರೇ ಪಕ್ಷದ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದಾರೆ. ಜನರ ಬಳಿಗೆ ಹೋಗೋಕೆ ಮುಖ ಇಲ್ಲ, ಶಾಸಕರಿಗೆ ಅನುದಾನ ಇಲ್ಲ. ಆಡಳಿತ ಹದಗೆಟ್ಟಿದೆ. ಅಧಿಕಾರಿಗಳು ಸರ್ಕಾರದ ಮಾತು ಕೇಳುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲ ಎಂಬುವಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು.
ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್, ಬಿಜೆಪಿಯಿಂದ ರಸ್ತೆ ತಡೆ ಪ್ರತಿಭಟನೆ : ತೈಲಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಇಂದು ತುಮಕೂರು ನಗರದಲ್ಲಿ ರಸ್ತೆ ತಡೆ ನಡೆಸಿ, ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತೈಲಬೆಲೆ ಏರಿಕೆಯಿಂದ ಸಹಜವಾಗಿ ದಿನಬಳಕೆ ವಸ್ತುಗಳ ಮೇಲೆಯೂ ಕೂಡ ಪರಿಣಾಮ ಬೀರಿದ್ದು, ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗುವಂತಾಗಿದೆ ಎಂದು ಶಾಸಕ ಜ್ಯೋತಿ ಗಣೇಶ್ ಹೇಳಿದರು.
ಇದನ್ನೂ ಓದಿ : ತೈಲ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿಯಿಂದ ಸೈಕಲ್ ಜಾಥಾ: ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ - BJP protest