ಬೆಂಗಳೂರು : ಮೂರು ಉಪಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ನಮಗೆ ಹಿನ್ನಡೆ ಆಗಿದೆ. ಏನು ಕೊರತೆ ಆಗಿದೆ ಅಂತ ಎಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಅನ್ನೋ ಪ್ರಶ್ನೆ ಬರಲ್ಲ. ಎಲ್ಲರೂ ಸೇರಿ ಜವಾಬ್ದಾರಿ ಹೊರಬೇಕಾಗುತ್ತದೆ. ಏನು ಲೋಪ ಆಗಿದೆ ಅಂತ ಚರ್ಚೆ ಮಾಡ್ತೇವೆ ಎಂದರು.
ಯತ್ನಾಳ್ ಪ್ರತ್ಯೇಕ ಹೋರಾಟ ಕೈಬಿಡಲು ಮನವಿ : ಪ್ರತ್ಯೇಕ ಹೋರಾಟ ಆರಂಭಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡದ ವಿರುದ್ಧ ಗರಂ ಆದ ಯಡಿಯೂರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲರೂ ಸಹ ತಮ್ಮ ಹೋರಾಟ ಬಿಟ್ಟು ನಮ್ಮ ಜತೆ ಕೈಜೋಡಿಸಿ ಅಂತ ವಿಜಯೇಂದ್ರ ವಿನಂತಿ ಮಾಡಿಕೊಂಡರು. ಆದರೂ ಸಹ ಅವರ ಸ್ವಪ್ರತಿಷ್ಠೆಯಿಂದ ಪ್ರತ್ಯೇಕ ಹೋರಾಟ ಮಾಡುತ್ತಿರುವುದು ಅವರಿಗೆ ಶೋಭೆ ತರಲ್ಲ ಎಂದು ಹೇಳಿದರು.
ಈಗಲಾದರೂ ಅವರು ಜಾಗೃತರಾಗಿ ಅವರೆಲ್ಲರೂ ಸೇರಿ ಪಕ್ಷ ಬಲಪಡಿಸಲು ಸಹಕಾರ ಕೊಡಬೇಕು ಎಂದಯ ನಾನು ವಿನಂತಿ ಮಾಡ್ತೇನೆ. ನಾವು ಮನವಿ ಮಾಡುವುದನ್ನು ಮಾಡ್ತೇವೆ, ಉಳಿದಿದ್ದು ಅವರಿಗೆ ಬಿಟ್ಟಿದ್ದು, ಕೇಂದ್ರದ ನಾಯಕರಿಗೆ ಬಿಟ್ಟಿದ್ದು, ಇದೆಲ್ಲ ಹೈಕಮಾಂಡ್ನವರ ಗಮನಕ್ಕೂ ಇದೆ, ನೋಡೋಣ ಏನು ಮಾಡುತ್ತಾರೆ ಎಂದರು.
ಇಡೀ ವಿಶ್ವವೇ ಅಚ್ಚರಿ ಪಡುವಂತಹ ಸಂವಿಧಾನ ಕೊಟ್ಟಿದ್ದಾರೆ: ಇವತ್ತು ಸಂವಿಧಾನದ ದಿನ. ಡಾ. ಬಿ. ಆರ್ ಅಂಬೇಡ್ಕರ್ ಇಡೀ ವಿಶ್ವವೇ ಅಚ್ಚರಿ ಪಡುವಂತಹ ಸಂವಿಧಾನ ಕೊಟ್ಟಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿ ಸಂವಿಧಾನ ದಿನ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಯಡಿಯೂರಪ್ಪ