ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕೀಯ ನಾಯಕರು ಟೆಂಪಲ್ ರನ್ ಮಾಡುವುದು ಜೋರಾಗುತ್ತಿದೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಶ್ರೀ ರಂಭಾಪುರಿ ಪೀಠಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ.
ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಮಠದಲ್ಲಿ ನಡೆಯುತ್ತಿರುವ ರೇಣುಕಾಚಾರ್ಯ ಜಯಂತಿ, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದರು. ಕ್ಷೇತ್ರದ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಠದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರಿಂದ ಮಾಜಿ ಸಿಎಂ ಮಠದ ಆವರಣದೊಳಗಡೆ ಆಗಮಿಸುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಿದರು. ರಂಭಾಪುರಿ ಶೀಗಳ ಆಹ್ವಾನ ಹಿನ್ನೆಲೆ ಜಾತ್ರಾ ಮಹೋತ್ಸವದಲ್ಲಿ ಭಾಗಿ ಆಗಲು ಬಾಳೆಹೊನ್ನೂರಿಗೆ ಆಗಮಿಸಿದ್ದಾರೆ.
ಬಿಎಸ್ವೈ ಕುಟುಂಬದಿಂದ ಚಂಡಿಕಾ ಯಾಗ : ಮತ್ತೊಂದೆಡೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬ ಭೇಟಿ ನೀಡಿದ್ದು, ದೇವಸ್ಥಾನದ ಆವರಣದಲ್ಲಿ ಚಂಡಿಕಾ ಯಾಗ ನಡೆಸಿದ್ದಾರೆ.
ಯಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದಂಪತಿ ಭಾಗಿ ಆಗಿದ್ದು, 9 ಋತ್ವಿಜರ ನೇತೃತ್ವದಲ್ಲಿ ಯಾಗ ಜರುಗಿದೆ. ಶನಿವಾರ ರಾತ್ರಿ ಪಾರಾಯಣ ನಡೆಸಿ ಇಂದು ನವ ಚಂಡಿಕಾ ಯಾಗ ಚಾಲನೆ ನೀಡಲಾಗಿತ್ತು. ಯಾಗಕ್ಕೂ ಮುನ್ನ ಬಿಎಸ್ವೈ ಕುಟುಂಬ ಮುಂಜಾನೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ, ಹೊರನಾಡು ಅನ್ನಪೂರ್ಣೇಶ್ವರಿ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಸುಮಾರು ಮೂರುವರೆ ಗಂಟೆಗಳ ಕಾಲ ಈ ಯಾಗ ನಡೆದಿದ್ದು, ನಂತರ ಪೂರ್ಣಾವತಿ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ : ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬಿಎಸ್ವೈ ಕುಟುಂಬದಿಂದ ರಥೋತ್ಸವ ಸೇವೆ - BSY Temple Visit