ಚಿಕ್ಕಮಗಳೂರು : ಈ ಲೋಕಸಭಾ ಚುನಾವಣೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇದೆ. ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಜನರ ಆಶೀರ್ವಾದದಿಂದ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆ, ಚಂಡಿಕಾಯಾಗ ಮುಗಿಸಿ ಬಂದ ನಂತರ ಮಾಜಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಎನ್ಡಿಆರ್ಎಫ್ ಹಣದ ವಿಚಾರವಾಗಿ ನಾನು ಮಾತನಾಡುವುದಿಲ್ಲ. ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಗಾಗಿ ಪೂಜೆ ಸಲ್ಲಿಸಿದ್ದೇವೆ. ದೇವಿಯ ಮುಂದೆ ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ದೇವರ ದರ್ಶನ ಪಡೆದು ತುಂಬಾ ದಿನವಾಗಿತ್ತು ಎಂದು ತಿಳಿಸಿದರು.
ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ : ದೇಶ ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಮತ್ತಷ್ಟು ಶಕ್ತಿಯನ್ನು ತಾಯಿ ದಯಪಾಲಿಸಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು. ಅದಕ್ಕಾಗಿ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ. ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎನ್ಡಿಆರ್ಎಫ್ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋದ ವಿಚಾರದ ಬಗ್ಗೆ ಮಾತನಾಡಿ, ಇಂತ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದಿತ್ತು ಎಂದರು.
ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ. ಸಿಎಂ ಚುನಾವಣೆ ಘೋಷಣೆ ಬಳಿಕ ಸುಪ್ರೀಂಕೋರ್ಟ್ ಮೊರೆ ಹೋಗುವ ಡ್ರಾಮಾ ಮಾಡಿದ್ದಾರೆ. ಅವರಿಗೆ ಶೋಭೆ ತರಲ್ಲ. ಅವರಿಗೆ ಹಣಕಾಸಿನ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ನಾವು ಸೋತಿದ್ದೇವೆ ಎಂದು ಕೇಂದ್ರಕ್ಕೆ ಹೋಗಿ ಒತ್ತಾಯ ಮಾಡಿದರೆ ಅದು ಬೇರೆ ಎಂದು ಹೇಳಿದರು.
ಬಿಜೆಪಿಯವರ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಜಯೇಂದ್ರ ಕಿಡಿಕಾರಿದ್ದು, ವಿನಾಶ ಕಾಲೇ ವಿಪರೀತ ಬುದ್ಧಿ ಅಷ್ಟೇ, ಸೋಲನ್ನ ಎದುರು ನೋಡುತ್ತಿರುವ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದೆ. ಚುನಾವಣೆ ಸೋಲನ್ನ ಎದುರು ನೋಡ್ತಿರೋ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಜತೆ ಸಂಧಾನಕ್ಕೆ ಮುಂದಾಗಲ್ಲ: ಬಿ ಎಸ್ ಯಡಿಯೂರಪ್ಪ