ಬೆಂಗಳೂರು: ಅಪಘಾತವೆಸಗಿ ರಾಜ್ಯ ಮಟ್ಟದ ಫುಟ್‌ಬಾಲ್ ಆಟಗಾರನ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ನಗರದ ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಜಾಪುರದ ನಿವಾಸಿ ಮಂಜುನಾಥ ಬಂಧಿತ ಆರೋಪಿ.
ಘಟನೆಯ ವಿವರ: ಜನವರಿ 21ರ ಬೆಳಗ್ಗೆ 2 ಗಂಟೆಯ ಸುಮಾರಿಗೆ ರಾಮಮೂರ್ತಿ ನಗರ ಮೇಲ್ಸೇತುವೆಯ ಸಮೀಪ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್‌ಬಾಲ್ ಆಟಗಾರ ಮೊನೀಶ್.ಕೆ (27) ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಲಾರಿ ನಿಲ್ಲಿಸಿದೇ ಚಾಲಕ ಪರಾರಿಯಾಗಿದ್ದ. ಮೊನೀಶ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು.
ಮೊನೀಶ್ ಯಾರು?: ಪರಿಕ್ರಮ ಎಫ್.ಸಿ, ಡೆಕ್ಕನ್ ಎಫ್.ಸಿ, ಯಂಗ್ ಚಾಲೆಂಜರ್ಸ್ ಎಫ್.ಸಿ ಸೇರಿದಂತೆ ವಿವಿಧ ಕ್ಲಬ್‌ಗಳ ಪರ ಆಡುತ್ತಿದ್ದ ಮೊನೀಶ್, ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್)- ಡಿನಿಂದ 2019ರಲ್ಲಿ ಕೋಚಿಂಗ್ ಲೈಸೆನ್ಸ್ ಪಡೆದಿದ್ದರು. ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ (ಬಿಡಿಎಫ್ಎ)-ಎ ಡಿವಿಷನ್ ಲೀಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರು ಈಗಲ್ಸ್ ಎಫ್.ಸಿ ಪರ ಆಡುತ್ತಿದ್ದರು.
ಮೊನೀಶ್ ತಂದೆ ಕೃಷ್ಣಮೂರ್ತಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಸಂಚಾರಿ ಠಾಣಾ ಪೊಲೀಸರು ಇದೀಗ ಆರೋಪಿ ಲಾರಿ ಚಾಲಕ ಮಂಜುನಾಥನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಯುವಕ ಸಾವು; ಈ ದುರಂತಕ್ಕೆ ತಾನೇ ಕಾರಣ ಎಂದು ಬೈಕ್ ಸವಾರ ಆತ್ಮಹತ್ಯೆ