ಬೆಂಗಳೂರು: ಪಡಿತರ ವಿತರಣೆ ಮಳಿಗೆಯ ಅಮಾನತು ಹಿಂಪಡೆಯಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪಡಿತರ ವಿತರಣೆಯ ಪರವಾನಗಿ ಹೊಂದಿದ್ದ ಪುರುಷೋತ್ತಮ್.ವಿ ಎಂಬವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಲೋಕಾ ಅಧಿಕಾರಿಗಳು ಬೆಂಗಳೂರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಪ್ರೀತಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ದೂರುದಾರ ಪುರುಷೋತ್ತಮ್.ವಿ ಅವರು ಹೊಂದಿದ್ದ ಪಡಿತರ ವಿತರಣೆ ಮಳಿಗೆಯ ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು. ಅಮಾನತು ಆದೇಶ ಹಿಂಪಡೆಯಲು 70 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರೀತಿ ಚಂದ್ರಶೇಖರ್ ಮುಂಗಡವಾಗಿ 50 ಸಾವಿರ ರೂ ಪಡೆದುಕೊಂಡಿದ್ದರು. ಈ ಕುರಿತು ಪುರುಷೋತ್ತಮ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು, ಬಾಕಿ 20 ಸಾವಿರ ರೂ ಸ್ವೀಕರಿಸುತ್ತಿದ್ದ ಮಧ್ಯವರ್ತಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದರು. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಕಂದಾಯ ಭವನದಲ್ಲಿದ್ದ ಪ್ರೀತಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮರ್ಡರ್ ಕೇಸ್: ಐವರು ಅರೆಸ್ಟ್, ಬಂಧಿತರ ಸಂಖ್ಯೆ 18ಕ್ಕೆ ಏರಿಕೆ - Renukaswamy Murder Case