ದಾವಣಗೆರೆ : ನಶಿಸಿ ಹೋಗುತ್ತಿರುವ ದೇಸಿ ತಳಿ ಜಾನುವಾರುಗಳ ಸಂತತಿಯನ್ನು ಪೋಷಣೆ ಮಾಡುವುದರ ಜೊತೆಗೆ ಅಭಿವೃದ್ದಿಪಡಿಸುತ್ತಿರುವ ಯುವ ರೈತನಿಗೆ ಬರಗಾಲದ ಕಪ್ಪು ಛಾಯೆ ಆವರಿಸಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಲ್ಲಿಗೇನಹಳ್ಳಿ ಗ್ರಾಮದ ಯುವ ರೈತ ಕುಮಾರ್ ಎಂಬುವವರು ಜಾನುವಾರುಗಳ ಮೇವು, ನೀರಿಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಹಳ್ಳಿಕಾರ್, ಗೀರ್, ಅಮೃತ್ ಮಾಲ್, ಮಲೆನಾಡು ಗಿಡ್ಡ, ಎರಡು ಎಮ್ಮೆ, ಕೃಷ್ಣ ಗಿರಿಯ ಹೋರಿ, ಆಂಧ್ರ ಪ್ರದೇಶದ ಎರಡು ಕರುಗಳು ಹೀಗೆ ಒಟ್ಟು 28 ದೇಶಿ ತಳಿ ರಾಸುಗಳ ತಳಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇಷ್ಟೆಲ್ಲ ತಳಿಯ ಜಾನುವಾರುಗಳನ್ನು ಪೋಷಣೆ ಮಾಡುತ್ತಿರುವ ಕುಮಾರ್ ಅವರಿಗೆ ಈ ಬಾರಿ ಬರಗಾಲ ಸುಟ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬರಗಾಲದ ಸಮಸ್ಯೆಯಿಂದ ಹೊರ ಬರಲು ಈ ಜಾನುವಾರುಗಳ ಮೂಲಕವೇ ಆದಾಯ ಗಳಿಸಲು ರೈತ ಮುಂದಾಗಿರುವುದು ವಿಶೇಷವಾಗಿದೆ.
ಈ ಬಗ್ಗೆ ಮಾತನಾಡಿರುವ ಯುವ ರೈತ ಕುಮಾರ್, ವಿವಿಧ ತಳಿಯ ಜಾನುವಾರುಗಳ ನಿರ್ವಹಣೆಗೆ ಬೇಕಾಗುವ ಖರ್ಚು ಭರಿಸಲು ನಾಲ್ಕು ಹೆಚ್ಎಫ್ ಹಸುಗಳನ್ನು ಸಾಕುತ್ತಿದ್ದು, ಇವುಗಳಿಂದ ಹಾಲು ಕರೆದು ಮಾರಾಟ ಮಾಡಿ ಬರುವ ಆದಾಯವನ್ನು ಬಳಸಿಕೊಳ್ಳುತ್ತೇನೆ. ಒಂದು ತಿಂಗಳಿಗೆ 12 - 15 ಸಾವಿರ ರೂ. ಹಣ ಬೇಕಾಗುತ್ತದೆ. ಇನ್ನು ಈ ದೇಶಿ ದನಕರುಗಳ ಸಗಣಿಯಿಂದ ಬೆರಣಿ (ಕುಳ್ಳು) ಗಳನ್ನು ಕಾರ್ಕಳ ಮೂಲದ ಆಯುಶ್ ಮಂಡಲಂ ಎಂಬ ಸಂಸ್ಥೆಗೆ ಮಾರಾಟ ಮಾಡುತ್ತಿದ್ದು, ಅದರಿಂದ ಹಣ ಬರುತ್ತಿದೆ. ಆಯುಶ್ ಮಂಡಲಂ ಸಂಸ್ಥೆ ಬೆರಣಿಯನ್ನು ಖರೀದಿ ಮಾಡಿ ಅಗ್ನಿಹೋತ್ರಕ್ಕೆ ಬಳಕೆ ಮಾಡುತ್ತಿದ್ದಾರೆ. ಒಂದು ಕ್ವಿಂಟಾಲ್ಗೆ 12 ಸಾವಿರ ರೂ. ಬೆಲೆ ಇದ್ದು, ಈಗಾಗಲೇ ಅವರು 80 ಕೆಜಿ ಮಾರಾಟ ಮಾಡಿದ್ದೇನೆ ಎಂದರು.
ಕುಮಾರ್ ಅವರು ಚಿಕ್ಕವರಾಗಿದ್ದಾಗಿಂದಲೂ ದೇಶಿ ಹಸುಗಳು, ಹೋರಿಗಳನ್ನು ಸಾಕುವ ಆಸೆ ಹೊಂದಿದ್ದರು. ಇಂದು ಇವುಗಳ ತಳಿಗಳನ್ನು ಉಳಿಸಲು ಪಣ ತೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕುಮಾರ್ ಉತ್ತಮ ದೇಶಿ ಹೋರಿಗಳ ಹುಡುಕಾಟ ಪ್ರಾರಂಭಿಸಿದ್ದರು. ಈ ವೇಳೆ, ಗ್ರಾಮೀಣ ಭಾಗದಲ್ಲಿ ನಾಟಿ ತಳಿಗಳು ನಶಿಸುತ್ತಿರುವುದು ಕುಮಾರ್ ಗಮನಕ್ಕೆ ಬಂದಿದೆ. ಇದರಿಂದ ದೇಶಿ ತಳಿ ಉಳಿಸುವ ನಿರ್ಧಾರ ಕೈಗೊಂಡು ಒಟ್ಟು ಇಪ್ಪತ್ತೆಂಟು ರಾಸುಗಳನ್ನು ತಮ್ಮ ಶೆಡ್ನಲ್ಲಿ ಸಾಕಣೆ ಮಾಡುತ್ತಿದ್ದಾರೆ. ಇನ್ನು ಒಟ್ಟು 4 ಲಕ್ಷ 80 ಸಾವಿರ ಖರ್ಚು ಮಾಡಿ ಕೊಡಗನೂರು ಕ್ರಾಸ್ ನಲ್ಲಿ ಫಾರಂ ನಿರ್ಮಿಸಿ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಕುಮಾರ್ ಹೊಂದಿದ್ದಾರೆ.
ಬರಗಾಲ ಆವರಿಸಿದ್ದರಿಂದ ಮೇವು ನೀರಿನ ಸಮಸ್ಯೆ ಎದುರಾಗಿದ್ದು, ಮೇವು ಶೇಖರಿಸಲು ಸಾಕಷ್ಟು ಹೈರಾಣಾಗಿಸಿದೆ. ಇದರಿಂದ ಕುಮಾರ್ ದೇಶಿ ದನಕರುಗಳ ಆಹಾರಕ್ಕಾಗಿ ಹಣ ನೀಡಿ ಮೇವು ಖರೀದಿ ಮಾಡುತ್ತಿದ್ದಾರೆ. ನಾಟಿ ದನ ಕರುಗಳಿಗೆ ನೀರಿನ ಸಮಸ್ಯೆ ಇರುವುದರಿಂದ ಕೊಳವೆ ಬಾವಿ ಮೊರೆ ಹೋಗಿದ್ದಾರೆ. ಹೋರಿ ಹಬ್ಬದಲ್ಲಿ ಕುಮಾರ್ ಸಾಕಿರುವ ಹೋರಿಗಳು ಭಾಗಿಯಾಗಿ ಪ್ರಶಸ್ತಿ ಕೂಡಾ ಪಡೆದಿವೆ.
ಇದನ್ನೂ ಓದಿ : ಹಾವೇರಿಯಲ್ಲಿ ದನಬೆದರಿಸುವ ಸ್ಪರ್ಧೆ : ಪ್ರಥಮ ಬಹುಮಾನ ₹ 80 ಸಾವಿರ ಮೌಲ್ಯದ ಹೆಚ್ಎಫ್ ತಳಿ ಹಸು