ಬೆಂಗಳೂರು: ಎಪ್ಪತ್ತೇಳನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ ತಿಂಗಳ 8ರಿಂದ 19ರ ವರೆಗೆ ಭಾರತ ರತ್ನ ಡಾ.ಬಿ.ಅಂಬೇಡ್ಕರ್ ಅವರ ಜೀವನ ಕುರಿತು ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಸಂಸತ್ ಭವನ ಮತ್ತು ಚೈತ್ಯಭೂಮಿ ನೋಡುಗರ ಗಮನ ಸೆಳೆಯಲಿದೆ.
ನಗರದಲ್ಲಿಂದು ಲಾಲ್‌ಬಾಗ್ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, "ಸ್ವಾತಂತ್ರ್ಯೋತ್ಸವದಂದು 216ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರಬಿಂದು ಆಗಿದ್ದಾರೆ. ಆರು ಲಕ್ಷ ಹೂವುಗಳನ್ನು ಹೊಸ ಸಂಸತ್ ಭವನದ ಪ್ರತಿಕೃತಿಯನ್ನು ರಚಿಸಲು ಬಳಸಲಾಗುತ್ತಿದೆ" ಎಂದು ತಿಳಿಸಿದರು.
"ಸುಮಾರು 3.4 ಲಕ್ಷ ಡಚ್ ಗುಲಾಬಿಗಳು ಮತ್ತು ಕ್ರೈಸಾಂಥೆಮಮ್‌ಗಳು ಡಾ.ಅಂಬೇಡ್ಕರ್ ಅವರ ಜನ್ಮಸ್ಥಳವನ್ನು ಚಿತ್ರಿಸುವ ಪ್ರತಿಷ್ಠಾಪನೆಗೆ ಮತ್ತು 3.4 ಲಕ್ಷ ಇದೇ ರೀತಿಯ ಹೂವುಗಳನ್ನು ಅಂಬೇಡ್ಕರ್ ಪ್ರತಿಕೃತಿ ಚೈತ್ಯಭೂಮಿ ರಚಿಸಲು ಬಳಸಲಾಗುತ್ತದೆ. ಗ್ಲಾಸ್ ಹೌಸ್ಗೆ ದೇಶ ವಿದೇಶಗಳಿಂದ 85 ಬಗೆಯ ಹೂವುಗಳು ಆಗಮಿಸಿವೆ" ಎಂದು ವಿವರಿಸಿದರು.
ಲಾಲ್‌ಬಾಗ್ ಸಸ್ಯೋದ್ಯಾನದ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ ಮಾತನಾಡಿ, "ಆಗಸ್ಟ್ 8ರಿಂದ 12 ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ. ಮೊದಲ ಆರು ದಿನಗಳ ನಂತರ ಹೂವುಗಳನ್ನು ಬದಲಾಯಿಸಲಾಗುತ್ತದೆ. ನಂತರ ಮೂರು ಲಕ್ಷ ಹೊಸ ಹೂವುಗಳು ಸಂಸತ್ ಭವನದಲ್ಲಿ, 1.70 ಲಕ್ಷ ಅಂಬೇಡ್ಕರ್ ಅವರ ಜನ್ಮಸ್ಥಳ ಸ್ಥಾಪನೆಗೆ ಮತ್ತು 1.70 ಲಕ್ಷ ಚೈತ್ಯ ಭೂಮಿಗೆ ಬಳಕೆಯಾಗುತ್ತದೆ. ಆಗಸ್ಟ್ 13ರಂದು ಈ ಹೂವುಗಳನ್ನು ಬದಲಾಯಿಸಲಾಗುವುದು" ಎಂದು ತಿಳಿಸಿದರು.
"ಪ್ರಸಕ್ತ ಅವಧಿಯ ಪ್ರದಶರ್ನಕ್ಕೆ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ನಿರೀಕ್ಷಿಸುತ್ತಿದ್ದು, ಅವರಿಗಾಗಿ ಪಾರ್ಕಿಂಗ್, ಭದ್ರತೆ, ಸಿಸಿಟಿವಿ ಕಣ್ಗಾವಲು ಮುಂತಾದ ವಿಸ್ತಾರವಾದ ವ್ಯವಸ್ಥೆಗಳನ್ನು ಯೋಜಿಸಲಾಗಿದೆ. ಗುರುತಿನ ಚೀಟಿಯೊಂದಿಗೆ ಸಮವಸ್ತ್ರದಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಟಿಕೆಟ್ ದರ ವಯಸ್ಕರಿಗೆ 80 ಮತ್ತು ಮತ್ತು ಮಕ್ಕಳಿಗೆ 30 ರೂಪಾಯಿ ಇರಲಿದೆ" ಎಂದರು.
ಪ್ರದರ್ಶನದ ಇತರೆ ವಿಶೇಷತೆಗಳು: "ಡಾ.ಅಂಬೇಡ್ಕರ್ ಅವರ ಹೋರಾಟದ ಬದುಕಿನ ಪ್ರಾರಂಭದಲ್ಲಿಯೇ ನಡೆದ ಮಹಾಡ್ ಸತ್ಯಾಗ್ರಹ ನೆನಪಿಸುವ ಕಲಾಕೃತಿ, ನಾಸಿಕ್ ಕಲಾರಾಮ್ ದೇವಾಲಯ ಪ್ರವೇಶದ ಕಲಾಕೃತಿ, ಕೊರೆಗಾಂವ್ ಜಯಸ್ತಂಭದ ಮಾದರಿ ಮತ್ತು ಅಂಬೇಡ್ಕರ್ ಪ್ರತಿಮೆ, ಹಿರಾಕುಡ್ ಅಣೆಕಟ್ಟೆಯ ಪ್ರತಿಕೃತಿ ಸೇರಿದಂತೆ ಇತರೆ ಆಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಭಾರತದ ಭೂಪಟ ಮತ್ತು ಅದರ ಎರಡೂ ಬದಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸಂವಿಧಾನದ ಪೀಠಿಕೆ ಕಲಾಕೃತಿ ಮತ್ತು ಇದರ ಜತೆಗೆ ಸಂಸತ್ನಲ್ಲಿ ಅಂಬೇಡ್ಕರ್ ಮಾತನಾಡುತ್ತಿರುವ ಕಲಾಕೃತಿ, ಇನ್ನೊಂದು ಬದಿಗೆ ಅಂಬೇಡ್ಕರ್ ಸಂಸತ್ನಲ್ಲಿ ಮಾತನಾಡುತ್ತಿರುವ ಕಲಾಕೃತಿ ಇರಲಿದೆ" ಎಂದರು.
"ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ತಂದೆ-ತಾಯಿ, ಅವರಿಗೆ ಪ್ರೇರಕ ಶಕ್ತಿಯಾಗಿದ್ದ ಬುದ್ದ, ಸಂತ ಕಬೀರ ಮತ್ತು ಫುಲೆ ದಂಪತಿ ಪ್ರತಿಮೆಗಳು, ಅಂಬೇಡ್ಕರ್ ಚಿತ್ರ ಸಂಯೋಜಿತ ಕಲಾಕೃತಿಗಳು, ಅಂಬೇಡ್ಕರ್ ಅವರ ಜೀವನ, ಸಾಧನೆ ಮತ್ತು ಯಶಸ್ಸು ಪ್ರಶಂಸೆ ಕುರಿತಂತೆ ಮಾಹಿತಿ ನೀಡಲಾಗುತ್ತದೆ. ಕಂಬಗಳಲ್ಲಿ ಪುಷ್ಪ ಡೂಮ್ಸ್ಗಳ ನಿರ್ಮಾಣ ಮಾಡಲಾಗುತ್ತಿದೆ. ಅಂಬೇಡ್ಕರ್ ಕುರಿತ ಅಂಚೆ ಚೀಟಿ ಪ್ರದೇಶನ, ದ್ವಾರಗಳಲ್ಲಿ ಅಂಬೇಡ್ಕರ್ ಅವರ ಕಲಾಕೃತಿಗಳು ಇತ್ಯಾದಿಗಳನ್ನು ಪ್ರದರ್ಶನದ ಮಾಡಲಾಗುವುದು" ಎಂದು ಅಧಿಕಾರಿಗಳು ವಿವರಿಸಿದರು.
ಲಾಲ್‌ಬಾಗ್‌ನ ಆಯ್ದ 12 ಕಡೆಗಳಲ್ಲಿ ಎಲ್ಇಡಿ ಪರದೆಯ ಮೂಲಕ ಪ್ರದರ್ಶನ ಏರ್ಪಡಿಸಲಾಗುವುದು. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭೀಮ ಸಂದೇಶ ಅನಾವರಣ ಮಾಡುವುದಾಗಿ ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ಬೀದಿ ವ್ಯಾಪಾರಿಗಳಿಗೆ ಮಂಗಳೂರಿನ 10 ಕಡೆ ವ್ಯಾಪಾರ ವಲಯ, 2 ಪುಡ್ ಸ್ಟ್ರೀಟ್ ನಿರ್ಮಾಣ: ಮೇಯರ್ - Business Zone