ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಸಪ್ತನದಿಗಳು ತುಂಬಿ ಹರಿಯುತ್ತಿವೆ. ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ. ಪೊಲೀಸ್ ಇಲಾಖೆಯಿಂದ ತುರ್ತು ಸಹಾಯವಾಣಿ ಆರಂಭಿಸಲಾಗಿದೆ.
ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ನಗರಕ್ಕೆ ನೀರು ನುಗ್ಗಿದೆ. ಇಲ್ಲಿನ ದನಗಳ ಪೇಟೆ ಘಟಪ್ರಭಾ ನದಿ ನೀರಿನಿಂದ ಜಲಾವೃತವಾಗಿದೆ. ನೀರು ಬಂದ ಹಿನ್ನೆಲೆ ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಜನರು ಸ್ಥಳಾಂತರ ಆಗುತ್ತಿದ್ದಾರೆ.
ನಿರಂತರ ಮಳೆಯಿಂದ ಘಟಪ್ರಭಾ ನದಿಗೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಲೋಳಸೂರು ಸೇತುವೆ ಸಮೀಪ ನೀರು ಬಂದಿದೆ. ಲೋಳಸೂರು ಸೇತುವೆ ಬಂದ್ ಆದರೆ ಗೋಕಾಕ್- ಸಂಕೇಶ್ವರ ಸಂಪರ್ಕ ಕಡಿತವಾಗಲಿದೆ. ಗೋಕಾಕ್, ಮೂಡಲಗಿ ತಾಲೂಕಿನ ಹಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಮಾರ್ಕಂಡೇಯ ನದಿಯಲ್ಲಿ ಹೆಚ್ಚಿನ ನೀರು ಹಿನ್ನೆಲೆ ಗೋಕಾಕ್ ಚಿಕ್ಕೋಳಿ ಸೇತುವೆ ಹತ್ತಿರಕ್ಕೆ ನೀರು ಬಂದಿದ್ದು, ಗೋಕಾಕ್- ಕೊಣ್ಣೂರ ಸಂಪರ್ಕಿಸುವ ಸೇತುವೆ ಮುಳುಗಡೆ ಆಗಲಿದೆ.
ನದಿಯಲ್ಲಿ ಹುಚ್ಚಾಟವಾಡುತ್ತಿದ್ದ ಯುವಕ ಜಸ್ಟ್ ಮಿಸ್: ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಕೊಣ್ಣೂರ ಬಳಿ ತುಂಬಿ ಹರಿಯುತ್ತಿರುವ ನದಿಯಲ್ಲಿ ಯುವಕನೊಬ್ಬ ಹುಚ್ಚಾಟವಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಕುಡಿದ ನಶೆಯಲ್ಲಿ ತುಂಬಿ ಹರಿಯುತ್ತಿರುವ ನದಿಯಲ್ಲಿಯೇ ಈಜಿ ಹುಚ್ಚು ಸಾಹಸ ಪ್ರದರ್ಶಿಸಿದ್ದಾನೆ. ನದಿ ಮಧ್ಯದವರೆಗೂ ಈಜಿ ಹೋಗಿ ಕೊನೆಗೂ ಸುರಕ್ಷಿತವಾಗಿ ದಡ ಸೇರಿದ್ದಾನೆ. ಯವಕನ ಹುಚ್ಚಾಟದ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಯುವಕ ನೀರು ಪಾಲಾಗುತ್ತಿದ್ದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಈಜಿ ದಡ ಸೇರಿದ್ದಾನೆ. ಇನ್ನೂ ಘಟಪ್ರಭಾ ನದಿ ತೀರಕ್ಕೆ ತೆರಳದಂತೆ ಗೋಕಾಕ್ ತಾಲೂಕು ಆಡಳಿತದ ಆದೇಶ ಹೊರಡಿಸಲಾಗಿದೆ.
ಹುಕ್ಕೇರಿ ತಾಲೂಕಿನ ಶಿರೂರ ಡ್ಯಾಮ್ ಕೂಡ ಸಂಪೂರ್ಣ ಭರ್ತಿಯತ್ತ ಸಾಗಿದೆ. ಜಲಾಶಯದಿಂದ 7,600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿ ನೀರಾವರಿ ಉದ್ದೇಶಕ್ಕಾಗಿ ಶಿರೂರ ಜಲಾಶಯ ನಿರ್ಮಾಣ ಮಾಡಿದ್ದು, ಸದ್ಯ ಜಲಾಶಯ ಅವಧಿಗೂ ಮುನ್ನವೇ ಶೇ. 95 ರಷ್ಟು ಭರ್ತಿಯಾಗಿದೆ. 3.69 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 3.02 ಟಿಎಂಸಿ ನೀರು ಸಂಗ್ರಹವಾಗಿದೆ.
ಮತ್ತೊಂದೆಡೆ ನಿರಂತರ ಮಳೆಯಿಂದ ಶಿರೂರ ಜಲಾಶಯಕ್ಕೆ 7,600 ಕ್ಯೂಸೆಕ್ ನೀರು ಒಳಹರಿವು ಬರ್ತಿದ್ದು, ಬಂದಷ್ಟೇ ಪ್ರಮಾಣದ (7,600 ಕ್ಯೂಸೆಕ್) ನೀರನ್ನು ಜಲಾಶಯದ ಅಧಿಕಾರಿಗಳು ಹೊರಗಡೆ ಬಿಡುತ್ತಿದ್ದಾರೆ. ಈ ನೀರು ಘಟಪ್ರಭಾ ನದಿ ಸೇರುತ್ತಿದೆ. ಇದರ ಪರಿಣಾಮ ಕುಂದರಗಿ, ಪಾಶ್ಚಾಪೂರ ಸೇರಿ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಶಿರೂರ ಜಲಾಶಯದ ಹಿನ್ನೀರಿನಲ್ಲಿರುವ ಕುಂದರಗಿಯ ಶ್ರೀ ಅಡಿವಿಸಿದ್ದೇಶ್ವರ ಮಠ ಸಂಪೂರ್ಣವಾಗಿ ಜಲಾವೃತವಾಗಿದೆ. ಅಂಕಲಗಿ ಮಠಕ್ಕೆ ಶ್ರೀಗಳು ಮತ್ತು ಮಠದ ಸಿಬ್ಬಂದಿ ಸ್ಥಳಾಂತರವಾಗಿದ್ದಾರೆ.
ತುರ್ತು ಸಹಾಯವಾಣಿ ಆರಂಭ: ಭಾರಿ ಮಳೆ ಹಿನ್ನೆಲೆ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಹಿನ್ನೆಲೆ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸೇವೆ ಪಡೆದುಕೊಳ್ಳಬಹುದು. ಏನಾದರೂ ಪ್ರವಾಹದ ಮುನ್ಸೂಚನೆ ಇದ್ದರೆ, ಸಮಸ್ಯೆಯಲ್ಲಿ ಸಿಲುಕಿಕೊಂಡರೆ ತಕ್ಷಣವೇ ಸಾರ್ವಜನಿಕರ ತುರ್ತು ಸೇವೆಗಾಗಿ ಆರಂಭಿಸಿದ ಫ್ಲಡ್ ಹೆಲ್ಪ್ ಲೈನ್ ಮತ್ತು ಪೊಲೀಸ್ ಸಹಾಯವಾಣಿಗೆ ಕರೆ ಮಾಡಬೇಕು ಎಂದಿದ್ದಾರೆ. ಪ್ರವಾಹ ಸಂಬಂಧಿಸಿದ ತುರ್ತು ಸಮಸ್ಯೆಗಾಗಿ ದೂ. 08312407290 ಗೆ ಕರೆ ಮಾಡಬೇಕು. ಪೊಲೀಸ್ ಸಹಾಯವಾಣಿಗಾಗಿ 0831247454 ಗೆ ಕರೆ ಮಾಡುವಂತೆ ಡಾ.ಭೀಮಾಶಂಕರ ಗುಳೇದ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಡಲ ಅಬ್ಬರಕ್ಕೆ ಕೊಚ್ಚಿಹೋದ ರಸ್ತೆ; ಮೀನುಗಾರರು, ವಿದ್ಯಾರ್ಥಿಗಳ ಪರದಾಟ - Uttara Kannada Rain