ಬೆಂಗಳೂರು: ಒಂದೂವರೆ ಶತಮಾನಕ್ಕೂ ಹಳೆಯದಾದ ಐಪಿಸಿ ಸೇರಿ ಮೂರು ಹೊಸ ಕ್ರಿಮಿನಲ್ ಅಪರಾಧಗಳು ಇಂದಿನಿಂದ ಬದಲಾವಣೆಯಾಗಿವೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್ಎಸ್), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಬದಲಿಗೆ ಭಾರತೀಯ ನಾಗರಿಕ ಸಂಹಿತೆ ಕಾಯ್ದೆಯಾಗಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲು ಭಾರತೀಯ ಸಾಕ್ಷಿ ಅಧಿನಿಯಮ ಇಂದಿನಿಂದ ಜಾರಿಗೊಂಡಿವೆ.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೊಸ ಕಾನೂನುಗಳ ಬಗ್ಗೆ ಅರಿಯಲು ಪೊಲೀಸರಿಗೆ ತರಬೇತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಬಿಎನ್ಎಸ್ಎಸ್ ಕಾಯ್ದೆಯಡಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಸೆಕ್ಷನ್ 194ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಇದೇ ಸೆಕ್ಷನ್ ಅನ್ವಯ ಮತ್ತೊಂದು ಅಸಹಜ ಸಾವು ಪ್ರಕರಣ ದಾಖಲಾಗಿದೆ. ಹೊಸ ಬಿಎನ್ಎಸ್ಎಸ್ ಅಡಿ ಬೆಂಗಳೂರಲ್ಲಿ ದಾಖಲಾದ ಮೊದಲ ಪ್ರಕರಣಗಳಿವು ಎಂದು ತಿಳಿದುಬಂದಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು?: ಇವತ್ತಿನಿಂದ ಹೊಸ ಅಪರಾಧ ಕಾನೂನುಗಳಡಿ ದೂರುಗಳು ದಾಖಲಾಗಲಿವೆ. ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಆ್ಯಪ್ ನೋಡ್ಕೊಂಡು ಕೆಲಸ ಮಾಡಬಹುದು. ಇದು ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: 'ಬುಲ್ಡೋಜರ್ ನ್ಯಾಯ'ದ ಹೊಸ ಕ್ರಿಮಿನಲ್ ಕಾನೂನುಗಳನ್ನು ಇಂಡಿಯಾ ಕೂಟ ಒಪ್ಪಲ್ಲ: ಕಾಂಗ್ರೆಸ್ - new Criminal laws
ಇನ್ಮುಂದೆ ದಾಖಲಾಗುವ ಎಲ್ಲ ಪ್ರಕರಣಗಳಿಗೆ ಹೊಸ ಕಾನೂನು ಅನ್ವಯ ಆಗಲಿದೆ. ಇಡೀ ದೇಶದಲ್ಲಿ ಜಾರಿಯಾಗಿದೆ. ಫೀಡ್ ಬ್ಯಾಕ್ ನೋಡಿ ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು.
ವಸಾಹತುಶಾಹಿ ಯುಗದ ಕಾನೂನುಗಳಿಗೆ ಇತಿಶ್ರೀ: ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಸೋಮವಾರ (ಜುಲೈ 1)ದಿಂದ ಜಾರಿಗೆ ಬಂದಿವೆ. ಈ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರಲಿದ್ದು, ವಸಾಹತುಶಾಹಿ ಯುಗದ ಕಾನೂನುಗಳಿಗೆ ಅಂತ್ಯ ಹಾಡಿವೆ.
ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಗೆ ಮುನ್ನುಡಿ ಬರೆಯಲಿವೆ.
ಇದನ್ನೂ ಓದಿ: ದೇಶದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನುಗಳು ಜಾರಿಗೆ; ಏನೆಲ್ಲ ಬದಲಾವಣೆ ಗೊತ್ತಾ? - NEW CRIMINAL LAWS