ಮಂಗಳೂರು (ದಕ್ಷಿಣ ಕನ್ನಡ) : ಗುಜರಾತ್ನಿಂದ ಶ್ರೀಲಂಕಾಕ್ಕೆ ತೆರಳುತ್ತಿದ್ದ ಹಡಗಿಗೆ ಜುಲೈ 20 ರಂದು ಗೋವಾ ಸಮೀಪ ಅಗ್ನಿ ಸ್ಪರ್ಶವಾಗಿದ್ದು, ಇದೀಗ ಮಂಗಳೂರು ಕಡಲ ತೀರದಲ್ಲಿರುವ ಈ ಹಡಗಿನಿಂದ ಆತಂಕವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
MV Maersk Frankfurt Cargo Container ಎಂಬ ಹಡಗು ಗುಜರಾತ್ ರಾಜ್ಯದ ಮುದ್ರಾದಿಂದ ಶ್ರೀಲಂಕಾ ದೇಶದ ಕೊಲೊಂಬೋಗೆ ತೈಲದೊಂದಿಗೆ ಸಂಚರಿಸುವಾಗ ಗೋವಾ ಕಡಲ ಕಿನಾರೆಯ ಸಮೀಪದಲ್ಲಿ ಜುಲೈ 20 ರಂದು ಅಗ್ನಿ ಅನಾಹುತಕ್ಕೀಡಾಗಿತ್ತು.
ಈ ಹಡಗಿಗೆ ಅಗ್ನಿ ಸ್ಪರ್ಶವಾಗಿರುವುದು ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆಯಿಂದ ತಿಳಿದು ಬಂದಿದ್ದು, ಇದೀಗ ಮಂಗಳೂರು ಕಡಲ ಕಿನಾರೆಯಿಂದ 30 ನಾಟಿಕಲ್ ಮೈಲು ದೂರದಲ್ಲಿದೆ. ಇದರಿಂದ ಮಂಗಳೂರು ಕಡಲ ಕಿನಾರೆಗೆ ಯಾವುದೇ ರೀತಿಯ ಅಪಾಯವಿರುವುದಿಲ್ಲ ಹಾಗೂ ಸಾರ್ವಜನಿಕರು ಆತಂಕಪಡುವ ಅಗತ್ಯತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಸಂಭಾವ್ಯ ಅವಘಡವನ್ನು ಎದುರಿಸಲು ಲಭ್ಯವಿರುವ ಉಪಕರಣಗಳು, ಸಲಕರಣೆಗಳು ಮತ್ತು ಮಾನವ ಸಂಪನ್ಮೂಲದೊಂದಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಕಾರವಾರ: ಸಮುದ್ರ ಮಧ್ಯ ಕಂಟೇನರ್ ತುಂಬಿದ ಹಡಗಿಗೆ ಬೆಂಕಿ; ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ - Fire Breaks Out At Container Ship