ಬೆಂಗಳೂರು : ಸರ್ಕಾರಿ ಜಾಗದಲ್ಲಿರುವ ಪೊಲೀಸ್ ಶಸ್ತ್ರಾಗಾರಕ್ಕೆ ನುಗ್ಗಿ ದಾಂಧಲೆ ಸೃಷ್ಟಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಿಚಿತರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಉಪನಗರದಲ್ಲಿರುವ ಸಿಎಆರ್ ಪಶ್ಚಿಮ ವಿಭಾಗದ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಆರೋಪಿಗಳು ದಾಂಧಲೆ ಮಾಡಿದ್ದರು.
ಫೆಬ್ರವರಿ 8ರಂದು ಸಿಎಆರ್ ಪಶ್ಚಿಮ ವಿಭಾಗದ ಶಸ್ತ್ರಾಗಾರದ ಬಳಿ ಬಂದಿದ್ದ 15 - 20 ಜನ ಆರೋಪಿಗಳು 'ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಬೇಕು' ಎಂದಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ರುದ್ರೇಶ್ ನಾಯ್ಕ್, 'ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ನನ್ನೊಂದಿಗೆ ಯಾಕೆ ದರ್ಪದಿಂದ ಮಾತನಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದಾಗ ಸಮವಸ್ತ್ರದಲ್ಲಿದ್ದ ಅವರ ಬಟ್ಟೆಯನ್ನು ಎಳೆದಾಡಿದ್ದರು. ಹೊರಗಡೆ ಬಂದಾಗ ಸಹ 60-70 ಜನ ಜೆಸಿಬಿ, ಕ್ಯಾಂಟರ್, ಲಾರಿ, ಟ್ಯಾಂಕರ್ಗಳೊಂದಿಗೆ ಸಿದ್ದವಾಗಿ ಬಂದಿದ್ದು, ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಕುರಿತು ಸಿಎಆರ್ ಕಾನ್ಸ್‌ಟೇಬಲ್ ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ