ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಕೇಸ್ ನಂಬರ್ 11/2024 ಅಡಿ ಎಫ್ಐಆರ್ ದಾಖಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ನಲ್ಲಿ ಅಧಿಕೃತವಾಗಿ ನಮೂದು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ A1, A2 ಆಗಿ ಸಿಎಂ ಪತ್ನಿ ಪಾರ್ವತಿ, A3 ಸಿಎಂ ಸಿದ್ದರಾಮಯ್ಯರ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು A4 ಆರೋಪಿಯಾಗಿದ್ದಾರೆ. ಕೋರ್ಟ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಬುಧವಾರ ಆದೇಶ ಹೊರಡಿಸಿದ್ದರು. ಡಿಸೆಂಬರ್ 24ರ ಒಳಗಾಗಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.
ಇದನ್ನೂ ಓದಿ: ಸಿಎಂ ವಿರುದ್ದದ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್ನಲ್ಲಿ ಇಂದು ಅರ್ಜಿ: ಸ್ನೇಹಮಯಿ ಕೃಷ್ಣ - Snehamayi krishna
ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ತನಿಖೆಗೆ ಹಿಂಜರಿಯಬಾರದೆಂಬ ಹೈಕೋರ್ಟ್ ತೀರ್ಪಿನ ಅಂಶವನ್ನು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು. ಸಿಆರ್ಪಿಸಿ ಸೆಕ್ಷನ್ 156(3)ರ ಅಡಿ ತನಿಖೆಗೆ ಸೂಚಿಸಲು ಇರುವ ಅಧಿಕಾರವನ್ನು ಬಳಸಿ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.
ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಮಂಗಳವಾರ ಹೈಕೋರ್ಟ್ ವಜಾಗೊಳಿಸಿ, ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿತ್ತು. ರಾಜ್ಯಪಾಲರು ಕೈಗೊಂಡಿರುವ ಸ್ವತಂತ್ರ ನಿರ್ಧಾರದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ. ರಾಜ್ಯಪಾಲರಂತಹ ಉನ್ನತ ಕಚೇರಿಯು ಕಡತದಲ್ಲಿರುವ ಕಾರಣಗಳನ್ನು ದಾಖಲಿಸಿದರೆ ಸಾಕಾಗುತ್ತದೆ. ಆ ಕಾರಣಗಳು ರಾಜ್ಯಪಾಲರ ಆದೇಶದ ಭಾಗದಲ್ಲಿ ಸಂಕ್ಷಿಪ್ತವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಯಾವೆಲ್ಲಾ ಸೆಕ್ಷನ್ ಅಡಿ ಎಫ್ಐಆರ್?: ಐಪಿಸಿ 120B, ಐಪಿಸಿ 166, ಐಪಿಸಿ 403, ಐಪಿಸಿ 406, ಐಪಿಸಿ 420, ಐಪಿಸಿ 426, ಐಪಿಸಿ 465, ಐಪಿಸಿ 468, ಐಪಿಸಿ 340, ಐಪಿಸಿ 351 ಐಪಿಸಿ 9 ಮತ್ತು ಐಪಿಸಿ 13 - ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆ ಹಾಗೂ ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ 1988 ಅಡಿಯಲ್ಲಿ 3, 53, 54 ಸೆಕ್ಷನ್ ಅಡಿ ಪ್ರಕರಣ ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ 2011 ಅಡಿಯಲ್ಲಿ 3, 4 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದೇನು?: ''ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇನ್ಮುಂದೆ ತನಿಖೆಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗುತ್ತವೆ. ಪ್ರಕರಣವು ತಾರ್ಕಿಕ ಅಂತ್ಯ ಕಾಣುವವರೆಗೂ ಹಾಗೂ ಸಿದ್ದರಾಮಯ್ಯ ಮುಡಾದಿಂದ ಪಡೆದ ಸೈಟ್ಗಳನ್ನು ಹಿಂದಿರುಗಿಸಿ, ಅದರ ಫಲಾನುಭವಿಗಳಿಗೆ ಕೊಡುವವರೆಗೂ ನನ್ನ ಹೋರಾಟ ಮುಂದುವರೆಯಲಿದೆ'' ಎಂದರು.
ಜೊತೆಗೆ, ಈ ಪ್ರಕರಣದಲ್ಲಿ 50 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿರುವ ಬಗ್ಗೆ ಸಿದ್ದರಾಮಯ್ಯನವರೇ ಹೇಳಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಇಂದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮುಂದಿನ ವಾರ ವಿಚಾರಗೆ ಬರಲಿದೆ. ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ತನಿಖೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಿಬಿಐಗೆ ವಹಿಸಬೇಕು ಎಂದು ಅರ್ಜಿಯಲ್ಲಿ ಕೇಳಿಕೊಂಡಿದ್ದೇನೆ. ಇಂದು ದಾಖಲಾದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ'' ಎಂದು ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದರು.