ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಬಳಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾದ ಕುರಿತು ಜೈಲಾಧಿಕಾರಿಗಳು, ಭದ್ರತಾ ಸಿಬ್ಬಂದಿ, ಸಂಬಂಧಪಟ್ಟ ಬ್ಯಾರಕ್ನಲ್ಲಿರುವ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ದಾಳಿ ವೇಳೆ ಕೆಲವು ಮೊಬೈಲ್ ಫೋನ್‌ಗಳು, ಚಾರ್ಜರ್ಗಳು ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಸಂಗ ಬೆಳಕಿಗೆ ಬಂದ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಚಟುವಟಿಕೆಗಳ ಮೇಲೆ ಬೆಂಗಳೂರು ಆಗ್ನೇಯ ವಿಭಾಗ ಹಾಗೂ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ. ಶನಿವಾರ ಆಗ್ನೇಯ ವಿಭಾಗದ ಪೊಲೀಸರ ತಂಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಫೋನ್ ಸೇರಿದಂತೆ 18 ಮೊಬೈಲ್ ಫೋನ್‌ಗಳ ಜೊತೆಗೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
ರೋಡ್ ರೇಜ್ ಘಟನೆಗಳ ಸಂದರ್ಭದಲ್ಲಿ ಸಂಯಮ ಕಳೆದುಕೊಳ್ಳದಂತೆ ಕಮಿಷನರ್ ಸೂಚನೆ: ರೋಡ್ ರೇಜ್ ಘಟನೆಗಳಾದಾಗ ಸಂಯಮ ಕಳೆದುಕೊಳ್ಳದಂತೆ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು ರಸ್ತೆ ಸಾರ್ವಜನಿಕರ ಆಸ್ತಿ, ಅದೇ ರೀತಿ ಸಂಚಾರಿ ನಿಯಮಗಳನ್ನ ಪಾಲಿಸುವುದು ಸಹ ಸಾರ್ವಜನಿಕರ ಕರ್ತವ್ಯ. ಸಂಚಾರದ ವೇಳೆ ವ್ಯತ್ಯಯಗಳಾದಾಗ ಸಂಯಮ ಕಳೆದುಕೊಳ್ಳುವುದರ ಬದಲು ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.
ಅನೇಕ ಸಂದರ್ಭಗಳಲ್ಲಿ ಸಣ್ಣ ವಿಚಾರಗಳಿಗೆ ರೋಡ್ ರೇಜ್ ಪ್ರಕರಣಗಳಾಗುತ್ತವೆ. ಅಂಥಹ ಸಂಚಾರ ನಿಯಮಗಳ ಉಲ್ಲಂಘನೆ, ಮತ್ತು ತೊಂದರೆಗಳಾದ ವಾಹನ ಸವಾರರು/ಸಾರ್ವಜನಿಕರು ಸಂಯಮ ಕಳೆದುಕೊಳ್ಳಬಾರದು. ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೆ 7 ನಿಮಿಷಗಳೊಳಗೆ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಅಥವಾ ನಿಯಮ ಉಲ್ಲಂಘನೆಯ ಫೋಟೋ ತೆಗೆದು 'ಪಬ್ಲಿಕ್ ಐ' ಆ್ಯಪ್ ನಲ್ಲಿ ಪ್ರಕಟಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಅಥವಾ ತೊಂದರೆಯುಂಟು ಮಾಡುವ ವ್ಯಕ್ತಿ ಅಥವಾ ಅವರ ವಾಹನದ ಫೋಟೋ ತೆಗದುಕೊಳ್ಳಿ, ವಾಹನದ ನಂಬರ್ ನೋಟ್ ಬರೆದಿಟ್ಟುಕೊಳ್ಳಿ. ಪೊಲೀಸರು ಬಂದಾಗ ಘಟನೆಯ ವಿವರ ಕೊಡಿ, ಎದುರು ವ್ಯಕ್ತಿಗೂ ಸಹ ವಿವರಿಸಲು ಅವಕಾಶ ನೀಡಿ ಎಂದು ಅವರು ತಿಳಿಸಿದರು.
ಅಲ್ಲದೆ ರೋಡ್ ರೇಜ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದಾಗ, ಮೊದಲು ಸಂಬಂಧಪಟ್ಟ ವ್ಯಕ್ತಿಯನ್ನ ಪೊಲೀಸರು ಪತ್ತೆ ಹಚ್ಚಬೇಕಾಗುತ್ತದೆ. ಆದ್ದರಿಂದ ಅದರ ಬದಲು ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೆ ನಾವು ಪರಿಸ್ಥಿತಿಯನ್ನ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ತಿಳಿಸಿದರು.