ಮಂಗಳೂರು: ನಗರದ ದೇರೆಬೈಲ್‌ನಲ್ಲಿ ನೂತನವಾಗಿ ಆರಂಭಗೊಂಡಿದ್ದ ರೆಸ್ಟೋರೆಂಟ್ವೊಂದು ವಿದ್ಯಾರ್ಥಿಗಳಿಗೆ ಮದ್ಯದ ದರದಲ್ಲಿ ಆಫರ್ ನೀಡಿದೆ ಎಂಬ ಪೋಸ್ಟ್ವೊಂದು ವೈರಲ್ ಆಗಿದ್ದು, ಇದು ವಿವಾದಕ್ಕೆ ಗುರಿಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ವಿರುದ್ಧ ಅಬಕಾರಿ ಇಲಾಖೆ ಎಫ್ಐಆರ್ ದಾಖಲು ಮಾಡಿದೆ.
ವಿದ್ಯಾರ್ಥಿಗಳಿಗೆ ಸ್ಪೂಡೆಂಟ್ಸ್ ನೈಟ್ಸ್ ಹೆಸರಿನಲ್ಲಿ ಮದ್ಯದ ದರದಲ್ಲಿ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಆಫರ್ ನೀಡಿದೆ. ಶಾಲೆಯ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟರ್ ವ್ಯವಸ್ಥೆ ಇದೆ ಎಂಬ ಆಫರ್ ಹೊಂದಿರುವ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಲಿಕ್ಕರ್ ಲಾಂಜ್ ನೈಟ್ ಪಾರ್ಟಿ ಆಯೋಜಿಸಿದೆ ಎಂಬ ಸ್ಟಿಕ್ಕರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸದ್ಯ ಲಿಕ್ಕರ್ ಲಾಂಜ್‌ನಲ್ಲಿ ಆಯೋಜನೆ ಆಗಿದ್ದ ಪಾರ್ಟಿಗೆ ಕಾವೂರು ಪೊಲೀಸರು ತಡೆ ನೀಡಿ ಬಾರ್ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿರುವುದು ಕರ್ನಾಟಕ ಅಬಕಾರಿ ಕಾಯ್ದೆ 1965 ಮತ್ತು ಪರವಾನಗಿ ನಿಬಂಧನೆಗಳಡಿ ನಿರ್ದಿಷ್ಟಪಡಿಸಿದ ಷರತ್ತುಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಅವರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯು ಬಾರ್ ಮತ್ತು ಪಬ್ಗಳಲ್ಲಿ ಇಂತಹ ಅಕ್ರಮ ಚಟುವಟಿಕೆ ತಡೆಯಲು ಬದ್ಧವಾಗಿದೆ. ಲಿಕ್ಕರ್ ಲಾಂಜ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದೆ ಇಂತಹ ಉಲ್ಲಂಘನೆ ತಡೆಯಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಇಂತಹ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಠಾಣೆಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಪುನೀತ್ ಕೆರೆಹಳ್ಳಿ ಬಂಧನ - Puneet Kerehalli Arrest