ಬೆಂಗಳೂರು: ಅಶ್ಲೀಲ ವಿಡಿಯೋ ಇರುವ ಪೆನ್ಡ್ರೈವ್ ಹಂಚಿಕೆ ಆರೋಪ ಪ್ರಕರಣ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರಿಗೆ ಸಂಕಷ್ಟ ತರುವ ಸಾಧ್ಯತೆ ಕಂಡುಬಂದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಿಐಡಿ ಸೈಬರ್ ಠಾಣೆಯಲ್ಲಿ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ)-ಲೈಂಗಿಕ ಕಿರುಕುಳ, 354 (ಡಿ) ಮಹಿಳೆಯ ನಿರಾಸಕ್ತಿಯ ಹೊರತಾಗಿಯೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವುದು, 354 ಬಿ-ಮಹಿಳೆ ಮೇಲೆ ಆಕ್ರಮಣ ಹಾಗೂ ಮಾಹಿತಿ, 506-ಜೀವ ಬೆದರಿಕೆ ಹಾಗೂ ಐಟಿ ಕಾಯ್ದೆಯಡಿ ಕೇಸು ದಾಖಲಾಗಿದೆ.
ಪ್ರಜ್ವಲ್ ವಿರುದ್ಧ ಹೊಳೆನರಸೀಪುರ, ಕೆ.ಆರ್.ನಗರ, ಸಿಐಡಿ ಸೈಬರ್ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ. ನಾಲ್ಕನೇ ಪ್ರಕರಣದಲ್ಲಿ ಪ್ರಜ್ವಲ್ ಮೊದಲ ಆರೋಪಿಯಾದರೆ, ಪ್ರೀತಂ ಗೌಡ ನಾಲ್ಕನೇ ಆರೋಪಿಯಾಗಿದ್ದಾರೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿತರಾಗಿರುವ ಪ್ರಜ್ವಲ್ಗೆ ನಾಲ್ಕನೇ ಪ್ರಕರಣ ಮತ್ತಷ್ಟು ತಲೆನೋವು ತಂದೊಡ್ಡಿದೆ. ಮಹಿಳೆಯ ಇಚ್ಚೆಗೆ ವಿರುದ್ಧವಾಗಿ ವೀಡಿಯೊ ಮಾಡಿ ಕಿರುಕುಳ ನೀಡಲಾಗಿದೆ. ಖಾಸಗಿ ವೀಡಿಯೊ ಸೆರೆಹಿಡಿದು ಪೆನ್ಡ್ರೈವ್ ಮೂಲಕ ಹರಿಬಿಡಲಾಗಿದೆ. ಇದಕ್ಕೆ ಮೂಲ ಕಾರಣ ಪ್ರಜ್ವಲ್ ಎಂದು ಸಂತ್ರಸ್ತೆ ದೂರಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪೆನ್ಡ್ರೈವ್ ಹಂಚಿಕೆಯ ಹಿಂದೆ ಪ್ರೀತಂ ಗೌಡ ಹಾಗೂ ಸಹಚರರಾದ ಶರತ್ ಹಾಗೂ ಕಿರಣ್ ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಜ್ವಲ್ ಪ್ರಕರಣ: ಎಸ್ಐಟಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಬಾಡಿ ವಾರೆಂಟ್ ಮೇರೆಗೆ ನಾಲ್ಕು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜುಲೈ 8ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಇಂದು 42ನೇ ಎಸಿಎಂಎಂ ಕೋರ್ಟ್ ಆದೇಶದ ಮೇರೆಗೆ ಜೂನ್ 29ರವರೆಗೆ ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್‌ರನ್ನು ಎಸ್ಐಟಿ ಅಧಿಕಾರಿಗಳು ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಮತ್ತೊಂದೆಡೆ, ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಸೂರಜ್ ರೇವಣ್ಣ ಅವರನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮೂಲಕ ಅಣ್ಣ-ತಮ್ಮ ಇಬ್ಬರನ್ನೂ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಪ್ರಜ್ವಲ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ - Prajwal Revanna