ಬೆಂಗಳೂರು: ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತರ ಸಹೋದರಿ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿದ್ಯಾ ಬಿರಾದಾರ್ ಪಾಟೀಲ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ವಾಮೀಜಿ ನೀಡಿರುವ ದೂರಿನ ವಿವರ: 'ಆಗಸ್ಟ್ 31ರಂದು ಮಧ್ಯಾಹ್ನ 3ರ ಸುಮಾರಿಗೆ ಮಹಿಳೆ, ತಾನು ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತರ ಸಹೋದರಿ ಎಂದು ಪರಿಚಯಿಸಿಕೊಂಡರು. ಬಳಿಕ ನಿಮ್ಮ ಅಶ್ಲೀಲ ವಿಡಿಯೋ ದೃಶ್ಯಾವಳಿಗಳ ಸಮೇತ ಡಿ.ಬಿ.ಪಲ್ಲವಿ ಹಾಗೂ ಸೂರ್ಯನಾರಾಯಣ ಎಂಬವರು ತಮಗೆ ದೂರು ನೀಡಿದ್ದಾರೆ ಎಂದು ಹೇಳಿ ಪದೇ ಪದೆ ಕಿರುಕುಳ ನೀಡಿದ್ದರು. ಬಳಿಕ ತಾವು ತಮ್ಮ ಕಾನೂನು ಸಲಹೆಗಾರ ಧನಂಜಯ್ ಅವರನ್ನು ವಿದ್ಯಾ ಬಿರಾದಾರ ಅವರನ್ನು ಭೇಟಿಯಾಗಲು ಕಳಿಸಿದ್ದೆ. ಬೆಂಗಳೂರಿನ ಗಾಂಧಿನಗರದ ಹೋಟೆಲ್ ಬಳಿ ಮಹಿಳೆಯನ್ನು ಭೇಟಿ ಮಾಡಿದ್ದರು. ಈ ವೇಳೆ ಆರೋಪಿ ಮಹಿಳೆ, ಸ್ವಾಮೀಜಿಯ ಅಶ್ಲೀಲ ವಿಡಿಯೋಗಳಿದ್ದು ಅದನ್ನು ಬಹಿರಂಗಪಡಿಸದಿರಲು 6 ಕೋಟಿ ರೂ ನೀಡಬೇಕು. ಹಾಗೂ ತಕ್ಷಣ 50 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಆ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದಾಗಿ ಬೆದರಿಸಿದ್ದರು' ಎಂದು ಸ್ವಾಮೀಜಿ ದೂರಿದ್ದಾರೆ.
ತಮ್ಮನ್ನು ಹೋಲುವಂತೆ ನಕಲಿ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳನ್ನು ಸೃಷ್ಟಿಸಲಾಗಿದ್ದು, ಅವುಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ರುದ್ರಮುನಿ ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನನ್ವಯ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮೊಬೈಲ್ ವಾಪಸ್ ಕೊಡದ ಸ್ನೇಹಿತನ ಕೊಲೆ, ಆರೋಪಿ ಸೆರೆ - Murder For Mobile