ಬೆಳಗಾವಿ: ಪ್ರೀತಿಸಿ ಕೈಕೊಟ್ಟಿದ್ದಲ್ಲದೇ ಬೇರೊಬ್ಬರೊಂದಿಗೆ ನಡೆದಿದ್ದ ಯುವತಿಯ ಮದುವೆಯನ್ನು ಮುರಿದ ಪ್ರೇಮಿ, ಪರಾರಿ ಆಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಯುವತಿ ಆತನ ಮನೆ ಮುಂದೆ ಪ್ರತಿಭಟನೆಗೆ ಕುಳಿತ ಘಟನೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನೇಕಾರ ಕಾಲೋನಿ ನಿವಾಸಿಯಾಗಿರುವ ಆರೋಪಿ ಯುವಕನ ವಿರುದ್ಧ ದೂರು ದಾಖಲಾಗಿದೆ. ಕಳೆದ ಆರು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಯುವಕ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದನು. ಆರು ವರ್ಷಗಳ ಕಾಲ ಯುವತಿ ಜೊತೆಗೆ ಸುತ್ತಾಡಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ ಎಂದು ನೆಪ ಹೇಳಿ ದೂರ ಸರಿದು ವಂಚಿಸಿದ್ದನೆಂದು ಯುವತಿ ದೂರಿದ್ದಾಳೆ.
ಬಳಿಕ ಪೋಷಕರು ಮಾಡಿಸಿದ್ದ ಮದುವೆಯನ್ನು ಯುವಕ ಮುರಿಯುವಂತೆ ಮಾಡಿದ್ದಾನೆ. ಮದುವೆ ಆದ ಮೊದಲ ದಿನವೇ ವರನ ಮನೆಯಲ್ಲಿ ಹೈಡ್ರಾಮಾ ಮಾಡಿ, ತನ್ನ ಬಳಿ ಇದ್ದ ವಿಡಿಯೋ ಶೇರ್ ಮಾಡಿ ಆಗಿದ್ದ ಮದುವೆಯನ್ನು ಮುರಿದಿದ್ದಾನೆಂದು ಯುವತಿ ಹೇಳಿದ್ದಾಳೆ.
ಇದೀಗ ಯುವತಿ ಪ್ರೀತಿಸಿದ್ದ ಯುವಕನ ನೂತನ ಗೃಹ ಪ್ರವೇಶ ಸಂದರ್ಭದಲ್ಲಿ ಆಗಮಿಸಿ ಫೋಷಕರೊಂದಿಗೆ ಧರಣಿ ನಡೆಸಿದ್ದಾಳೆ. ಮನೆಯತ್ತ ಬರುತ್ತಿದ್ದಂತೆ ಯುವಕನ ಕುಟುಂಬಸ್ಥರು ಬಾಗಿಲು ಮುಚ್ಚಿಕೊಂಡಿದ್ದರಿಂದ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಯುವಕ ಮನೆಯಿಂದ ಪರಾರಿ ಆಗಿರುವುದಾಗಿ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡಿ ಮನೆ ಮುಂದೆಯೇ ಯುವತಿ ಮತ್ತು ಅವರ ಪೋಷಕರು ಕುಳಿತು ಪ್ರತಿಭಟಿಸಿದರು. ನಮ್ಮ ಪುತ್ರಿಯನ್ನು ಮದುವೆ ಮಾಡಿಕೊಂಡು ಬಾಳು ಕೊಡುವಂತೆ ಯುವತಿಯ ಪೋಷಕರು ಯುವಕನ ಕುಟುಂಬಸ್ಥರನ್ನು ಒತ್ತಾಯಿಸಿದ್ದಾರೆ.
ಯುವಕನ ವಿರುದ್ಧ ದೂರು ದಾಖಲು: ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಯುವಕ, ಆತನ ಸಹೋದರಿಯರು ಹಾಗೂ ಸಂಬಂಧಿ ಸೇರಿದಂತೆ ಒಟ್ಟು 8 ಜನರ ಮೇಲೆ ಯುವತಿ ಕೇಸ್ ದಾಖಲಿಸಿದ್ದಾಳೆ. ಸೆಕ್ಷನ್ 143, 147, 417, 376, 323, 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅತ್ಯಾಚಾರ, ಮಾನಹಾನಿ, ಖಾಸಗಿ ಫೋಟೊ ವೈರಲ್ ಸೇರಿದಂತೆ ಇತರೆ ಪ್ರಕರಣಗಳ ಕುರಿತು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ.
ಓದಿ: ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ