ಬೆಂಗಳೂರು: ಕಳ್ಳರ ಕೃತ್ಯವನ್ನೇ ಬಳಸಿಕೊಂಡು ಎಟಿಎಂಗೆ ತುಂಬಿಸಬೇಕಿದ್ದ ಹಣವನ್ನು ತುಂಬದೆಯೇ, ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಎಟಿಎಂ ನಿರ್ವಹಣೆ ಕಂಪನಿಯ ಸಿಬ್ಬಂದಿ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಟಿಎಂ ನಿರ್ವಹಣಾ ಕಂಪನಿ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ನ ಸಿಬ್ಬಂದಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?: ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಕಳ್ಳರು ಕೈಚಳಕ ತೋರಿದ್ದ ಘಟನೆ ಜುಲೈ 6ರಂದು ನಡೆದಿತ್ತು. ಬೆಡ್ಶೀಟ್ ಸುತ್ತಿಕೊಂಡು ಬಂದಿದ್ದ ಕಳ್ಳರು, ಮೊದಲು ಎಟಿಎಂ ಯಂತ್ರ ಇರುವ ಕೊಠಡಿಯ ಸಿಸಿಟಿವಿ ಕ್ಯಾಮರಾಗಳಿಗೆ ಕಪ್ಪು ಸ್ಪ್ರೇ ಹೊಡೆದು ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಕ್ಯಾಶ್ ಬಾಕ್ಸ್ ಕತ್ತರಿಸಿ ನಗದು ದೋಚಿ ಪರಾರಿಯಾಗಿದ್ದರು. ಎಟಿಎಂ ಯಂತ್ರದಲ್ಲಿದ್ದ 16.56 ಲಕ್ಷ ರೂ. ನಗದನ್ನು ದೋಚಿ ಕಳ್ಳರು ಪರಾರಿಯಾಗಿರುವುದಾಗಿ ಬೆಳ್ಳಂದೂರು ಠಾಣೆಗೆ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಕಂಪನಿಯ ಪ್ರತಿನಿಧಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣಾ ಪೊಲೀಸರು, ತನಿಖೆ ನಡೆಸಿದಾಗ ಕಳ್ಳರು ಎಟಿಎಂ ಯಂತ್ರದಲ್ಲಿದ್ದ ಸುಮಾರು 6,500 ರೂ. ನಗದನ್ನಷ್ಟೇ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು. ಅನುಮಾನದ ಹಿನ್ನೆಲೆ ಮತ್ತಷ್ಟು ತನಿಖೆ ಕೈಗೊಂಡಾಗ ಅಸಲಿಗೆ ಸೆಕ್ಯೂರ್ ವ್ಯಾಲ್ಯೂ ಕಂಪನಿಯ ಸಿಬ್ಬಂದಿಯೇ 16.50 ಲಕ್ಷ ರೂ. ಹಣವನ್ನು ಎಟಿಎಂಗೆ ತುಂಬಿಸಿರಲಿಲ್ಲ. ಆನಂತರ ನಡೆದಿದ್ದ ಕಳ್ಳತನದ ಕೃತ್ಯದ ಲಾಭ ಪಡೆದುಕೊಂಡಿದ್ದ ಎಟಿಎಂ ನಿರ್ವಹಣಾ ಕಂಪನಿ ಸಿಬ್ಬಂದಿ, ಒಟ್ಟು 16.56 ಲಕ್ಷ ರೂ. ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸುಳ್ಳು ಪ್ರಕರಣ ದಾಖಲಿಸಿದ್ದ ಎಟಿಎಂ ನಿರ್ವಹಣಾ ಕಂಪನಿಯ ಪ್ರತಿನಿಧಿ ವಿರುದ್ಧವೇ ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಐವರನ್ನ ಬಂಧಿಸಲಾಗಿದೆ. ಮೂಲ ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಎಟಿಎಂ ಕಳ್ಳರ ಗ್ಯಾಂಗ್ ಸಕ್ರಿಯ; ಒಂದೇ ದಿನ ಎರಡು ಕಡೆ ಕೈಚಳಕ - ATM Thieves Gang