ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಪಂದ್ಯದ ಸಂದರ್ಭದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ಕ್ರಿಕೆಟ್ ಅಭಿಮಾನಿ ಮಧು(21) ಎಂಬಾತನ ವಿರುದ್ಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುಧವಾರ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ನುಸುಳಿದ ಮಧುನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು.
ಮುಂಬೈ ಇನ್ನಿಂಗ್ಸ್ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದ ಮಧು ಏಕಾಏಕಿ ಮೈದಾನದೊಳಗೆ ನುಗ್ಗಿದ್ದಾನೆ. ಯುಪಿ ನಾಯಕಿ ಅಲೀಸಾ ಹೀಲಿ ಆತನನ್ನು ತಳ್ಳುವ ಮಾಡುವ ಮೂಲಕ ಭದ್ರತಾ ಸಿಬ್ಬಂದಿಯ ಕೆಲಸವನ್ನು ಸುಲಭಗೊಳಿಸಿದ್ದರು. ಬಳಿಕ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಆರೋಪಿಗೆ ನಗರದ ಪ್ರತಿಷ್ಠಿತ ಕ್ಲಬ್‌ವೊಂದರಿಂದ ಪಂದ್ಯದ ಟಿಕೆಟ್ ದೊರೆತಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಮಧು ವಿರುದ್ಧ ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಹಾಗೂ 290 (ಸಾರ್ವಜನಿಕ ತೊಂದರೆ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಂದ್ಯದ ಟಿಕೆಟ್ ನೀಡಿದವರಿಗೂ ಎಚ್ಚರಿಕೆ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: WPL: ರಿಚಾ, ಮೇಘನಾ, ಆಶಾ ಅಬ್ಬರಕ್ಕೆ ಯುಪಿ ವಾರಿಯರ್ಸ್ ತತ್ತರ; ಆರ್ಸಿಬಿಗೆ 2 ರನ್‌ಗಳ ರೋಚಕ ಗೆಲುವು