ಬೆಂಗಳೂರು: ಸದ್ಯ ಸಿಲಿಕಾನ್ ಸಿಟಿಯಲ್ಲಿ ಮಳೆ ವಿರಾಮ ನೀಡಿದ್ದು, ಮಳೆ ನೀರು ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಮಳೆ ನೀರು ನಾಲ್ಕೈದು ದಿನಗಳ ಕಾಲ ಒಂದೆಡೆ ಶೇಖರಣೆಯಾದರೆ ಡೆಂಗ್ಯೂ ಹರಡುವ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಕಡಿಮೆಯಾಗಿದ್ದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲಿವೆ. ಇನ್ನು ಮಲೇರಿಯಾ, ಹೆಚ್1ಎನ್1, ಕಾಲರಾ, ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇತರೆ ಸೋಂಕು ಕಾಯಿಲೆಗಳು ಜಾಸ್ತಿಯಾಗಲಿವೆ.
ಇನ್ನು, ದಸರಾ ಹಬ್ಬದ ಕಸ ಇನ್ನೂ ನಗರದ ವಿವಿಧ ಭಾಗಗಳಲ್ಲಿ ವಿಲೇವಾರಿಯಾಗದೆ ಉಳಿದಿದ್ದು, ಸಾವಿರಾರು ಟನ್ ಕಸದ ರಾಶಿ ನೀರಿನಲ್ಲಿ ಕೊಳೆತು ನಾರುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ. ಒಟ್ಟಿನಲ್ಲಿ ಬಿಟ್ಟುಬಿಡದೇ ಸುರಿದ ಮಳೆ ಮತ್ತು ಹೆಚ್ಚಲಿರುವ ಚಳಿಗೆ ಸಾರ್ವಜನಿಕರು ಜಾಗರೂಕರಾಗಿ ಮತ್ತು ಸಮಯೋಚಿತ ವೈದ್ಯಕೀಯ ಸಲಹೆಗಳನ್ನು ಪಡೆಯುವುದು ಬಹಳ ಮುಖ್ಯವಾಗಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಸಾರ್ವಜನಿಕ ಆರೋಗ್ಯದ ಕುರಿತು ಗಮನ ಹರಿಸಬೇಕಿದೆ.
ಪಾಲಿಕೆಯಿಂದ ಮಾರ್ಗಸೂಚಿ: ಮಳೆಯಿಂದ ತಗ್ಗು ಪ್ರದೇಶ, ರಾಜಕಾಲುವೆ, ಕೆರೆಯ ಆಸುಪಾಸಿನ ಜಾಗಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾದ ಬೆನ್ನಲ್ಲೇ ಬಿಬಿಎಂಪಿ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ. ನಿರಂತರ ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಲರಾ, ಜಾಂಡಿಸ್, ಡೆಂಗ್ಯೂ, ಕರುಳಬೇನೆ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ ನೀಡಲಾಗಿದೆ. ಆರ್ಆರ್ ನಗರ, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ ವಲಯಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ:
- ಬೆಂಗಳೂರಿನ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ನೀಡುವುದು ಕಡ್ಡಾಯವಾಗಿದೆ.
- ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು (ಫ್ರೂಟ್ ಬೌಲ್) ಮಾರಾಟ ನಿಷೇಧ.
- ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಹಾಲೋಜೆನ್ ಮಾತ್ರೆಗಳನ್ನು ನೀಡಬೇಕು
- ನೆರೆ ಪೀಡಿತ ಪ್ರದೇಶ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಬೇಕು.
- ಪ್ರತಿ ವಾರ್ಡ್ ಗಳ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆಗಳಲ್ಲಿ ಔಷಧಿ ಸಿಗುವಂತೆ ಕ್ರಮ.
- ತುರ್ತು ಪರಿಸ್ಥಿತಿ ನಿಭಾಯಿಸಲು ಪಾಲಿಕೆಯ ಎಲ್ಲಾ ಸಿಬ್ಬಂದಿ ಸನ್ನದ್ಧರಾಗಿರಬೇಕು.
- ನೀರು ಸಂಗ್ರಹಿಸುವ ಟ್ಯಾಂಕರ್ ಗಳನ್ನು ಶುದ್ಧಗೊಳಿಸಿ ಅಗತ್ಯಕ್ಕೆ ತಕ್ಕಂತೆ ಸಿಗುವಂತೆ ನೋಡಿಕೊಳ್ಳಬೇಕು.
"ಅತಿಯಾದ ಮಳೆಯಿಂದಾಗಿ ಎಲ್ಲೆಡೆ ನೀರು ನಿಂತಿದ್ದು, ಇನ್ಮುಂದೆ ಸೊಳ್ಳೆಗಳ ಕಾಟ ಹೆಚ್ಚಾಗಬಹುದು. ಸೊಳ್ಳೆ ಕಚ್ಚುವುದರಿಂದ ಇತರೆ ಜ್ವರಕ್ಕೆ ಕಾರಣವಾಗಬಹುದು. ಹಾಗಾಗಿ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವಿಟಮಿನ್ - ಸಿ ಹಾಗೂ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಬೇಕಿದೆ ಎಂದು ಕಾವೇರಿ ಆಸ್ಪತ್ರೆಯ ಆಂತರಿಕ ಔಷಧ ಸಲಹೆಗಾರ್ತಿ ಡಾ. ಶಿಲ್ಪಾ ರಾಜೇಂದ್ರ ಹೇಳಿದ್ದಾರೆ.
"ಎಲ್ಲೆಡೆ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು, ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಶೌಚಾಲಯಕ್ಕೆ ಹೋದ ಬಳಿಕ ಕಡ್ಡಾಯವಾಗಿ ಕೈ ತೊಳೆಯಬೇಕು. ಹೊರ ಮತ್ತು ತೆರೆದ ತಿಂಡಿಗಳನ್ನು ಸೇವಿಸಬಾರದು. ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು" ಎಂದು ಸಲಹೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಹಿಂಗಾರು ಮಳೆ ಅನಾಹುತಕ್ಕೆ 25 ಮಂದಿ ಸಾವು; ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ಹಾನಿ