ಚಿಕ್ಕೋಡಿ: "ಬಿಜೆಪಿಯವರು ರಾಜ್ಯಪಾಲರನ್ನು ಕೈಗೊಂಬೆಯಂತೆ ಆಡಿಸುತ್ತಿದ್ದಾರೆ. ನಾನು ಆವಾಗ್ಲೂ ಅದನ್ನೇ ಹೇಳಿದ್ದೆ, ಈವಾಗ್ಲೂ ಹೇಳ್ತಿನಿ. ಮುಡಾ ಪ್ರಕರಣವನ್ನು ಬಿಜೆಪಿಯವರು ರಾಜಕೀಯವಾಗಿ ಅಷ್ಟೇ ಬಳಸುತ್ತಿದ್ದಾರೆ. ಅದರಲ್ಲಿ ಸಿಎಂ ಅವರ ಪಾತ್ರ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ" ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಬುಧವಾರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, "ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ನಮ್ಮ ತಂದೆಯು ಕೂಡ ಮುಂದಿನ ಬಾರಿ ಸಿಎಂ ಆಕಾಂಕ್ಷಿ ಎಂದಷ್ಟೇ ಹೇಳಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನದ ಕುರ್ಚಿ ಕಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ" ಎಂದು ಹೇಳಿದರು.
"ಪ್ರವಾಹದಿಂದಾಗಿ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಹಾನಿಯಾಗಿದೆ. ಪ್ರವಾಹದ ಹೊಡೆತಕ್ಕೆ ಶಾಲೆಗಳು ಸೇರಿದಂತೆ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯದಿಂದ ಬೆಳೆ ಹಾನಿಯಾದ ಪ್ರತೀ ಹೆಕ್ಟೇರ್ಗೆ ಒಟ್ಟಾಗಿ 11 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುತ್ತಿದ್ದಾರೆ. ಆದರೆ, ಈ ಪರಿಹಾರ ಹಣ ರೈತರಿಗೆ ಸಾಲುತ್ತಿಲ್ಲ. ರೈತರ ಒಳಿತಿಗಾಗಿ ಹಾಗೂ ಅನುಕೂಲಕ್ಕಾಗಿ ಪರಿಹಾರ ಧನವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಕೇಂದ್ರದ ಬಳಿ ಕೇಳಿಕೊಳ್ಳುತ್ತೇವೆ" ಎಂದರು.
ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಮಾತನಾಡಿ, "ಈಗಾಗಲೇ ಪ್ರಕರಣದ ಕುರಿತು ತನಿಖೆ ಪ್ರಾರಂಭವಾಗಿದೆ. ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡುವುದಾಗಿಯೂ ಹೇಳಿದ್ದಾರೆ. ಮುಂದೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡೋಣ" ಎಂದು ತಿಳಿಸಿದರು.
"ಈ ಭಾಗದ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಹತ್ತಿರ ನಾವು ಈ ಭಾಗದ ರೈಲ್ವೆ ಯೋಜನೆಗಳ ಬಗ್ಗೆ ಖುದ್ದಾಗಿ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ನಿಯೋಜಿತ ವಿಜಯಪುರ- ಶೇಡಬಾಳ -ಅಥಣಿ ರೈಲ್ವೆ ಮಾರ್ಗದ ಪ್ರಸ್ತಾವನೆ ಬಗ್ಗೆ ತುಂಬಾ ಜನ ಕೇಳುತ್ತಿದ್ದಾರೆ. ಆದಷ್ಟು ಬೇಗನೆ ಈ ಭಾಗಕ್ಕೆ ಬೇಕಾದ ರೈಲ್ವೆ ಯೋಜನೆಗಳನ್ನು ರೂಪಿಸಲಾಗುವುದು" ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ತೊಂದರೆಯಾದ್ರೆ ತೆಲಂಗಾಣ ಸರ್ಕಾರವೂ ಹೋಗುತ್ತೆ: ಸಚಿವ ಸತೀಶ್ ಜಾರಕಿಹೊಳಿ - Satish Jarkiholi