ರಾಮನಗರ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾಸ್ಕರ್ (31) ಕೊಲೆಯಾದ ವ್ಯಕ್ತಿ. ಈತನ ತಂದೆ ಕೃಷ್ಣಪ್ಪ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಯಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ವಿವರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಕೋವಿಡ್ ಸಮಯದಲ್ಲಿ ತನ್ನ ಗ್ರಾಮಕ್ಕೆ ಹಿಂದಿರುಗಿದ್ದ. ಬಳಿಕ ಯಾವುದೇ ಕೆಲಸ ಮಾಡದೆ ಜೂಜು, ಮದ್ಯದ ಚಟಕ್ಕೆ ದಾಸನಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈತನ ಸಾಲ ತೀರಿಸುವುದಕ್ಕಾಗಿ ಕುಟುಂಬದವರು ಈ ಹಿಂದೆ ಒಂದು ಎಕರೆ ಭೂಮಿಯನ್ನು ಮಾರಾಟ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಮತ್ತೆ 14 ಗುಂಟೆ ಭೂಮಿಯನ್ನು ಮಾರಾಟ ಮಾಡಿದ್ದು, ಈ ಹಣಕ್ಕಾಗಿ ಭಾಸ್ಕರ್ ತಂದೆಯನ್ನು ಪೀಡಿಸುತ್ತಿದ್ದ. ಈ ವಿಚಾರಕ್ಕೆ ತಂದೆ ಮಗನ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಇಬ್ಬರೂ ಪಾನಮತ್ತರಾಗಿದ್ದು, ಮಗ ಮಲಗಿದ್ದಾಗ ಮಚ್ಚಿನಿಂದ ಮುಖದ ಭಾಗಕ್ಕೆ ತಂದೆ ಹಲ್ಲೆ ಮಾಡಿದ್ದಾನೆ. ಮಾರಣಾಂತಿಕ ಏಟು ಬಿದ್ದ ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ತಲೆಮರೆಸಿಕೊಂಡಿದ್ದ ಆರೋಪಿ: ಮಗನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಕೃಷ್ಣಪ್ಪ, ತಕ್ಷಣ ಮನೆಯಿಂದ ಪರಾರಿಯಾಗಿದ್ದ. ಕೊಲೆ ನಡೆದಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲ ಕಡೆ ಹುಡುಕಾಡಿ, ಗ್ರಾಮದ ಹೊರವಲಯದಲ್ಲಿ ರಾಗಿಮೆದೆಯ ಬಳಿ ಮಲಗಿದ್ದ ಕೃಷ್ಣಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ವಿಜಯಪುರ: ಮಾರಕಾಸ್ತ್ರದಿಂದ ಹಲ್ಲೆ, ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ - youth murder
ಪ್ರತ್ಯೇಕ ಪ್ರಕರಣ; ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ: ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದವ. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ, ಅಲ್ಲಿ ವಿವಾಹಿತ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಸಿಲುಕಿದ್ದ ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು, ಕುತ್ತಿಗೆಗೆ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.