ಆನೇಕಲ್ (ಬೆಂಗಳೂರು): ಐದು ವರ್ಷದ ಹೆಣ್ಣು ಮಗುವಿಗೆ ತೀವ್ರ ಚಿತ್ರಹಿಂಸೆ ನೀಡಿದ ಆರೋಪ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಲತಂದೆಯನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮೊದಲ ಗಂಡನ ಮಕ್ಕಳನ್ನು ಹಿಂಸಿಸಿದ ಆರೋಪದ ಮೇಲೆ ತಾಯಿ ಮಂಜುಳಾ ಮತ್ತು ಆಕೆಯ ಎರಡನೇ ಗಂಡ ಮಂಜುನಾಥ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಲಯದ ಅಧಿಕಾರಿಗಳ ಸಹಕಾರದೊಂದಿಗೆ ಹೆಬ್ಬಗೋಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಐದು ವರ್ಷದ ಮಗುವಿನ ಕೈಯಲ್ಲಿ ನೀರಿನ ಬಕೆಟ್ ಎತ್ತಿ ತರಲು ತಂದೆ- ತಾಯಿ ತಾಕೀತು ಮಾಡಿದ್ದರು. ಆದರೆ, ನೀರಿನ ಬಕೆಟ್ ಎತ್ತಲು ಸಾಧ್ಯವಾಗದ ಕಾರಣಕ್ಕೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎರಡನೇ ಗಂಡ ಮಂಜುನಾಥನೊಂದಿಗೆ ಜೀವನ ನಡೆಸಲು ಮಕ್ಕಳು ಅಡ್ಡಿಯಾಗುತ್ತಾರೆ ಎಂದು ತಾಯಿ ಹಿಂಸೆ ನೀಡುತ್ತಿದ್ದಾಳೆ ಎನ್ನಲಾಗಿದೆ. ಮೊದಲ ಮಗುವನ್ನು ಬೇರೆಡೆ ಓದಲು ಬಿಟ್ಟು, ಎರಡನೇ ಹೆಣ್ಣು ಮಗುವನ್ನು ಮಾತ್ರ ತಮ್ಮೊಂದಿಗೆ ಇರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗದ ಮಗುವಿಗೆ ಬರೆ ಬರುವಷ್ಟು ಹೊಡೆದು, ಸಿಗರೇಟ್ನಿಂದ ಸುಟ್ಟಿದ್ದಾರೆಂದು ಆಪಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಲತಂದೆಯನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯಿಯನ್ನು ಮಗುವಿನ ಜೊತೆ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎರಡು ಚಿನ್ನದ ಮಳಿಗೆಗಳಲ್ಲಿ ಶೂಟೌಟ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು