ರಾಯಚೂರು : ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ ಭೂ ಪರಿಹಾರ ನೀಡದೆ ವಿಳಂಬ ಮಾಡಿರುವ ಕಾರಣಕ್ಕೆ ಭೂಸಂತ್ರಸ್ತರು, ವಕೀಲರು ಸಹಾಯಕ ಆಯುಕ್ತರ ಕಚೇರಿಯಲ್ಲಿನ ಪೀಠೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸಹಾಯಕ ಆಯುಕ್ತ (ಎಸಿ) ಕಚೇರಿಯಲ್ಲಿ ಇಂದು ಈ ಘಟನೆ ನಡೆದಿದೆ. ರಸ್ತೆ ನಿರ್ಮಾಣ ಹಾಗೂ ಏತನೀರಾವರಿ ಯೋಜನೆಗಾಗಿ 2008ರಲ್ಲಿ ಸರ್ಕಾರ ರೈತರಿಂದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ವಶಕ್ಕೆ ಪಡೆದುಕೊಂಡ ಭೂಮಿಯ ಮಾಲೀಕರಿಗೆ ಭೂ ಪರಿಹಾರವನ್ನು ಪಾವತಿ ಮಾಡಬೇಕಾಗಿತ್ತು. ಆದ್ರೆ ಈವರೆಗೆ ಪರಿಹಾರ ನೀಡಿಲ್ಲ. ಹಲವು ಬಾರಿ ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ರೂ, ಪರಿಹಾರ ನೀಡದೆ ವಿಳಂಬ ಮಾಡ್ತಿದೆ. ನೋಟಿಸ್ಗೆ ಸ್ಪಂದನೆ ನೀಡುತ್ತಿಲ್ಲ ಎಂಬ ದೂರು ಬಂದಿತ್ತು.
ಸಣ್ಣ ನೀರಾವರಿ ಇಲಾಖೆಯಿಂದ 2008ರಲ್ಲಿ ದದ್ದಲ್ ಗ್ರಾಮದಲ್ಲಿ ಏತನೀರಾವರಿ ಯೋಜನೆಗಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಇವರಿಗೆ ನೀಡಬೇಕಾದ ಭೂ ಪರಿಹಾರ ನೀಡಿಲ್ಲ. ಇದರ ಬಗ್ಗೆ ನ್ಯಾಯಾಲಯದಿಂದ ಆದೇಶ ಮಾಡಿದರೂ ಹಣವನ್ನು ಕೊಟ್ಟಿಲ್ಲ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರವನ್ನು ಬರೆದು ಅಟ್ಯಾಚ್ಮೆಂಟ್ ವಾರೆಂಟ್ ನೀಡಲಾಗಿದೆ. ಆದರೂ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
ಕಚೇರಿಯೊಳಗಿನ ಕುರ್ಚಿ, ಟೇಬಲ್, ಕಂಪ್ಯೂಟರ್ ಜಪ್ತಿ: ದದ್ದಲ್ ಗ್ರಾಮದಲ್ಲಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಲಕ್ಷಾಂತರ ರೂಪಾಯಿ ಹಣ ಜಮಾ ಮಾಡಬೇಕು. ಆದ್ರೂ ಮಾಡಿಲ್ಲ. ಇದಕ್ಕೂ ಮುನ್ನ ನ್ಯಾಯಾಲಯದಿಂದ 5 ಬಾರಿ ಅಟ್ಯಾಚ್ಮೆಂಟ್ ವಾರೆಂಟ್ ಆರ್ಡರ್ ಮಾಡಲಾಗಿತ್ತು. ಆದ್ರೂ ಹಣವನ್ನು ಜಮಾ ಮಾಡಿಲ್ಲ. ಹೀಗಾಗಿ ಸಂತ್ರಸ್ತರು ಕಚೇರಿಯೊಳಗಿನ ಕುರ್ಚಿಗಳು, ಟೇಬಲ್, ಕಂಪ್ಯೂಟರ್ ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿಕೊಳ್ಳುತ್ತಿರುವಾಗ ಕಚೇರಿಗೆ ಬಂದ ಸಹಾಯಕ ಆಯುಕ್ತರು ವಕೀಲರೊಂದಿಗೆ ಹಾಗೂ ರೈತರೊಂದಿಗೆ ಸರಿಯಾಗಿ ಮಾತನಾಡಿಲ್ಲ. ಬದಲಾಗಿ ರೈತರಿಗೆ ಗೆಟ್ಔಟ್ ಎಂದಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ತೊಂದರೆ ಅನುಭವಿಸುತ್ತಿರುವ ರೈತರು : ಸೆಕೆಂಡ್ ಎಡಿಷನ್ ಸಿವಿಲ್ ಕೋರ್ಟ್, ಪ್ರಿನ್ಸಿಪಾಲ್ ಕೋರ್ಟ್ ಆದೇಶ ಮಾಡಿದೆ. ಏತನೀರಾವರಿ ಯೋಜನೆ ಜೊತೆಗೆ ಜೆಗರಕಲ್ ಮಲ್ಲಾಪುರ, ಸುಕೇಶ್ವರಹಾಳ ಗ್ರಾಮದಲ್ಲಿನ ರೈತರಿಗೂ ಭೂ ಪರಿಹಾರ ನೀಡಿಲ್ಲ. ಹಣ ನೀಡುವಂತೆ ಕೋರ್ಟ್ ಮೂಲಕ ನೋಟಿಸ್ ಸೂಚನೆ ನೀಡಿದ್ರು ಭೂ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡದ ಪರಿಣಾಮ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಸಹಾಯಕ ಆಯುಕ್ತರ ಕುರ್ಚಿ ಸಮೇತವಾಗಿ ಜಪ್ತಿ ಮಾಡಿಕೊಂಡಿದ್ದರಿಂದ ಕಚೇರಿಗೆ ಸಹಾಯಕ ಆಯುಕ್ತೆ ಮಹೆಬೂಬಿ ಆಗಮಿಸಿದಾಗ ಕುಳಿತುಕೊಳ್ಳಲು ಕುರ್ಚಿಯಿಲ್ಲದೆ ನಿಂತಿದ್ರು. ಆಗ ಸಿಬ್ಬಂದಿ ಬೇರೆ ಕುರ್ಚಿಯನ್ನು ತಂದುಕೊಟ್ಟರು. ಮಾಧ್ಯಮದವರು ಹಾಗೂ ಜನರು ಒಳಗಡೆ ಬಂದಾಗ, ವಕೀಲರು ಹಾಗೂ ರೈತರು ಮಾತುಕತೆ ನಡೆಸಿದರು.
ಇದನ್ನೂ ಓದಿ : ಜಮೀನು ಕಳೆದುಕೊಂಡ ರೈತನಿಗೆ ಸಿಗದ ಪರಿಹಾರ: ಎಸಿ ಕಚೇರಿ ಮತ್ತು ಪುರಸಭೆ ಕಚೇರಿಯ ಚರಾಸ್ತಿ ಜಪ್ತಿ