ಮಂಡ್ಯ: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಎಂಬವರನ್ನು ಅಪಹರಿಸಿ, ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್, ಪವಿತ್ರ ಗೌಡ ಹಾಗೂ ಸಹಚರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ) ಕಾರ್ಯಕರ್ತರು ಮಂಡ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ್ದಾರೆ.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ರೈತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ನೀಡಿದರು.
ದರ್ಶನ್ ಅವರಿಂದ ಕನ್ನಡ ಚಲನಚಿತ್ರರಂಗಕ್ಕೆ ಕಳಂಕ: "ಚಲನಚಿತ್ರ ಸಮಾಜದಲ್ಲಿ ಬದಲಾವಣೆ ತರಬಹುದಾದ ಪ್ರಬಲ ದೃಶ್ಯ ಮಾಧ್ಯಮ. ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ಬದುಕು ಬದಲಿಸಿಕೊಂಡವರನ್ನು ನೋಡಿದ್ದೇವೆ. ಆದರೆ, ಚಲನಚಿತ್ರದಲ್ಲಿ ಆದರ್ಶ ನಾಯಕನಂತೆ ನಟಿಸಿ, ನಿಜ ಜೀವನದಲ್ಲಿ ಖಳನಾಯಕನಂತೆ ವರ್ತಿಸಿ ಅಮಾಯಕ ಯುವಕನನ್ನು ಹತ್ಯೆ ಮಾಡಿರುವ ದರ್ಶನ್ ಕನ್ನಡ ಚಲನಚಿತ್ರ ರಂಗಕ್ಕೆ ಕಳಂಕ ತಂದಿದ್ದಾರೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
"ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶ ಇತ್ತು. ಆದರೆ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡು ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಇದೇ ವೇಳೆ ಒತ್ತಾಯಿಸಿದರು.
"ಹತ್ಯೆಯಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ, ಪ್ರಕರಣ ಮುಚ್ಚಿ ಹಾಕುವ ಸಂಶಯ ಇದೆ. ಹೀಗಾಗಿ ಸಿಬಿಐ ತನಿಖೆಗೆ ವಹಿಸಬೇಕು. ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ನ್ಯಾಯಸಮ್ಮತ ತನಿಖೆ ನಡೆಸಬೇಕು" ಎಂದರು.
ರೌಡಿಶೀಟರ್ ಪಟ್ಟಿಗೆ ದರ್ಶನ್ ಸೇರಿಸಿ: "ದರ್ಶನ್ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಅವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಈತ ಅಭಿನಯಿಸಿರುವ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು. ಚುನಾವಣೆಗಳಲ್ಲಿ ಪ್ರಚಾರಕ್ಕೆ ಕರೆಯಬಾರದು. ಹಾಗೊಮ್ಮೆ ಪ್ರಚಾರ ಮಾಡಿದರೆ ಅಂತಹ ಅಭ್ಯರ್ಥಿಗೆ ಮತ ನೀಡಬಾರದು" ಎಂದು ಹೇಳಿದರು.
ರೈತ ಸಂಘದ ಇಂಗಲಗುಪ್ಪೆ ಕೃಷ್ಣೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.