ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವುದು ರೈತರ ಖುಷಿಗೆ ಕಾರಣವಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದು ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ. ಈಗಾಗಲೇ ಬಿತ್ತನೆಗಾಗಿ ರೈತರು ಉಳುಮೆ ಕಾರ್ಯದಲ್ಲಿ ನಿರತರಾಗಿದ್ದು, ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರ ವಿತರಣೆಗಾಗಿ ಕೃಷಿ ಇಲಾಖೆ ಸಿದ್ಧತೆಯನ್ನ ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ ಜೂನ್ 1 ರಿಂದ ಜೂನ್ 12 ವರಗೆ 39 ಮಿ.ಮೀ ವಾಡಿಕೆ ಮಳೆಯಾಗುತ್ತಿತ್ತು, ಈ ಬಾರಿ 87 ಮಿ.ಮೀ ಮಳೆಯಾಗಿದ್ದು, ಕಳೆದ ಬಾರಿಗಿಂತ ಹೆಚ್ಚಾಗಿದೆ. ಜಿಲ್ಲೆಯ ದೇವನಹಳ್ಳಿಯಲ್ಲಿ 44.4 ಮಿ.ಮೀ ವಾಡಿಕೆ ಮಳೆ ಇದ್ದು, ಈ ಬಾರಿ 103.6 ಮಿ.ಮೀ ಮಳೆಯಾಗಿದೆ, ದೊಡ್ಡಬಳ್ಳಾಪುರದಲ್ಲಿ 40.0 ಮಿ.ಮೀ ವಾಡಿಕೆ ಮಳೆ ಇದ್ದರೆ, ಈ ಬಾರಿ 91.3 ಮಿ.ಮೀ ಮಳೆಯಾಗಿದೆ, ಹೊಸಕೋಟೆಯಲ್ಲಿ 37.8 ಮಿ.ಮೀ ವಾಡಿಕೆ ಮಳೆ ಇದ್ದು ಈ ಬಾರಿ 67.5 ಮಿ.ಮೀ ಮಳೆಯಾಗಿದೆ, ನೆಲಮಂಗದಲ್ಲಿ 43.7 ಮಿ.ಮೀ ವಾಡಿಕೆ ಮಳೆ ಇದ್ದು ಈ ಬಾರಿ 85.4 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನಲ್ಲಿ ಪ್ರಮುಖವಾಗಿ ರಾಗಿ, ಅಲಸಂದಿ, ತೊಗರಿ,ಕಡ್ಲೇಕಾಯಿ ಮತ್ತು ಮುಸುಕಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳಯಲಾಗುತ್ತದೆ. ರಾಗಿ ಮತ್ತು ಮುಸಿಕಿನ ಜೋಳಕ್ಕೆ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿ ಮಾಡುತ್ತಿರುವುದರಿಂದ ರೈತರು ರಾಗಿ ಮತ್ತು ಮುಸುಕಿನ ಜೋಳವನ್ನ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ: ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುವುದರಿಂದ ಕೃಷಿ ಇಲಾಖೆ ಸಹ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಸಿದ್ಧತೆಯನ್ನ ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಸ್ತಾನು ಮಾಡಲಾಗಿದೆ, ಯೂರಿಯಾ ಮತ್ತು ಡಿಎಪಿಯ ರಸಗೊಬ್ಬರಗಳ ದಸ್ತಾನುಗಳನ್ನ ಅಂಗಡಿಗಳಲ್ಲಿ ಮಾಡಲಾಗಿದೆ, ರೈತರಿಗೆ ಕೊರತೆಯಾಗದ ರೀತಿಯಲ್ಲಿ ಬೇಡಿಕೆಗೆ ತಕ್ಕಂತೆ ದಸ್ತಾನು ಇರುವಂತೆ ವ್ಯವಸ್ಥೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ರಾಜೇಶ್ವರಿ.ಡಿ ರೈತರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಮಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಫಲತ್ತತೆ ಹೆಚ್ಚುವುದು. ಭೂಮಿಯನ್ನ ಉಳುಮೆ ಮಾಡದೇ ಹಾಗೆಯೇ ಬಿಟ್ಟರೆ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುವುದು, ಉಳುಮೆ ಮಾಡಿದ್ದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗುವುದು, ಇದರಿಂದ ಮಣ್ಣಿನ ತೇವಾಂಶ ಹೆಚ್ಚಾಗುವುದು. ಬಿಸಿಲಿಗೆ ಮಣ್ಣಿನಲ್ಲಿರುವ ಕ್ರಿಮಿ ಕೀಟಗಳು ನಾಶವಾಗುತ್ತದೆ, ಇದರಿಂದ ಬೆಳೆಗಳಿಗೆ ಯಾವುದೇ ರೋಗಭಾದೆ ಕಾಡುವುದಿಲ್ಲ ಎಂದರು.
ಇವತ್ತಿನ ಯಾಂತ್ರಿಕರಣದ ಬೇಸಾಯದಿಂದ ರೈತರು ಅಂತರಬೆಳೆಗಳನ್ನು ಬೆಳೆಯುವುದನ್ನ ನಿಲ್ಲಿಸಿದ್ದಾರೆ, ಯಾಂತ್ರಿಕರಣದ ಬೇಸಾಯ ಪದ್ಧತಿಯಲ್ಲು ಅಂತರಬೆಳೆಗಳನ್ನ ಬೆಳೆಯುವ ಬಗ್ಗೆ ಕೃಷಿ ಇಲಾಖೆ ಪ್ರತ್ಯಾಕ್ಷಿತೆಗಳನ್ನ ಮಾಡಲಾಗುತ್ತಿದೆ, ರೈತರು ಪ್ರತ್ಯಾಕ್ಷಿತೆಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳಿಂದ ಮಾಹಿತಿಯನ್ನು ತಿಳಿದುಕೊಳ್ಳಬಹುದು, ಈ ಹಿಂದೆ ರೈತರು ಅಂತರಬೆಳೆಯಲ್ಲಿ ರಾಗಿ ಜೊತೆ ಅಲಸಂಧಿ,ತೊಗರಿ, ಸಾಸಿವೆ, ಕಡ್ಲೇಕಾಯಿ ಬೆಳೆಯುತ್ತಿದ್ದರು.
ದ್ವಿದಳಧಾನ್ಯಗಳು ವಾತಾವರಣದಲ್ಲಿರುವ ಸಾರಜನಕವನ್ನು ಹಿರಿಕೊಂಡು ಭೂಮಿಗೆ ಕೊಡುತ್ತಿದ್ದವು, ಇದರಿಂದ ಉತ್ತಮ ಇಳುವರಿ ಸಿಗುತ್ತಿತ್ತು ಜೊತೆಗೆ ಮನೆಗೆ ಬೇಕಾದ ಬೆಳೆಕಾಳು ಸಿಗುತ್ತಿದ್ದವು. ಇವತ್ತು ಅಂತರಬೆಳೆ ಮಾಯಾವಾಗಿದೆ. ಇದರಿಂದ ರಸಗೊಬ್ಬರದ ಮೂಲಕ ಸಾರಜನಕವನ್ನ ಭೂಮಿಗೆ ಕೊಡಬೇಕಾದ ಸ್ಥಿತಿ ಇದೆ ಎಂದರು.
ಇದನ್ನೂ ಓದಿ: ಮುಂಗಾರು ಮಳೆ: ಹಸಿರು ಹೊದ್ದು ನಿಂತ ಐತಿಹಾಸಿಕ ದೊಡ್ಡಹುಣಸೆ ಮರಗಳು - MONSOON RAIN