ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ 'ಬರಪೀಡಿತ ಗ್ರಾಮ' ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿಯ ಬಹುತೇಕ ಗ್ರಾಮಗಳು ಬರದಿಂದ ಕೂಡಿವೆ. ಹನಿನೀರಿಗೂ ಗ್ರಾಮಾಂತರ ಭಾಗದ ಜನ ತಾತ್ವರ ಪಡುತ್ತಿದ್ದರು. ಆದರೆ ಇದೀಗ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಕೆರೆಗೆ ಜೀವಜಲ ಹರಿದು ಬಂದಿದ್ದರಿಂದ ಗ್ರಾಮದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಳೆರಾಯನ ಕೃಪೆಯಿಂದ ಇಡೀ ಕೆರೆ ತುಂಬಿದ ಪರಿಣಾಮ ರೈತರು ಅಡಿಕೆ ತೋಟಗಳನ್ನು ಮಾಡಲು ಹೊರಟಿದ್ದಾರೆ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಬೆಳೆಗೆ ಭರಪೂರ ನೀರು ಸಿಗುತ್ತಿದೆ.
ರೈತ ಕರಿಯಪ್ಪ ಮಾತನಾಡಿ, "ಗ್ರಾಮದಲ್ಲಿ 700 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಏಕೆಂದರೆ ಇದು ಬರಪೀಡಿತ ಭೂಮಿ. ಈಗ ಕೆರೆ ನಿರ್ಮಿಸಿ ನೀರು ಹರಿದು ಬಂದಿದ್ದು ಹತ್ತಿ, ಮೆಕ್ಕೆಜೋಳ, ರಾಗಿ ಎಲ್ಲಾ ಬೆಳೆಗೆ ಉಪಯೋಗವಾಗಲಿದೆ. ನೀರು ಸಮೃದ್ಧವಾಗಿ ಸಿಗುತ್ತಿರುವುದರಿಂದ ಈಗಾಗಲೇ ಅಡಿಕೆ ಹಾಕಿದ್ದೇವೆ. ಸಾವಿರಾರು ಎಕರೆ ಪ್ರದೇಶಕ್ಕೆ ಇಲ್ಲಿನ ನೀರು ಉಪಯೋಗವಾಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆರೆ ನಿರ್ಮಾಣಕ್ಕೆ ಧರ್ಮಸ್ಥಳ ಸಂಘದ ಬೆಂಬಲ: ಕೆರೆ ನಿರ್ಮಾಣ ಮಾಡಲು ಸ್ಥಳೀಯ ಶಾಸಕ ಬಿ.ದೇವೇಂದ್ರಪ್ಪ ಅವರ ಪರಿಶ್ರಮವೂ ಹೆಚ್ಚಿದೆ. ಲಕ್ಷಾಂತರ ರೂಪಾಯಿ ಅನುದಾನ ತಂದು ಕೆರೆ ನಿರ್ಮಿಸಿ ರೈತರಿಗೆ ಆಸರೆಯಾಗಿದ್ದಾರೆ. ಅಲ್ಲದೇ, ಧರ್ಮಸ್ಥಳ ಸಂಘದವರೂ ಕೂಡ ಕೈಜೋಡಿಸಿದ್ದಾರೆ.
ಗ್ರಾ.ಪಂ.ಸದಸ್ಯ ಸಿದ್ದೇಶ್ ಪ್ರತಿಕ್ರಿಯಿಸಿ, "ಇದು ಮೊದಲು ಪುಟ್ಟ ಗೋಕಟ್ಟೆ ಆಗಿತ್ತು. ಶಾಸಕರು ಗೋಕಟ್ಟೆಯಿಂದ ದೊಡ್ಡ ಕೆರೆ ನಿರ್ಮಿಸಿದ್ದಾರೆ. ಇಲ್ಲಿ ಮಳೆ ಬಂದ್ರೆ ನೀರು ನಿಲ್ಲದೆ ಹರಿದು ಹೋಗುತ್ತಿತ್ತು. ಇದೀಗ ಕೆರೆ ನಿರ್ಮಾಣ ಮಾಡಿ ನೀರು ನಿಲ್ಲುವಂತೆ ಮಾಡಲಾಗಿದೆ. ಎಲ್ಲಾ ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ'' ಎಂದರು.
ಇದನ್ನೂ ಓದಿ: ಹಾವೇರಿ: ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ - heggeri lake